ಅಖಿಲೇಶ್ ಪರವಾಗಿ ರಕ್ತದಲ್ಲಿ ಪತ್ರ ಬರೆದ ಬಾಲಕಿ

ಘಾಝಿಯಾಬಾದ್,ಜ.6: ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯಾಗಿರುವ ಸೈಕಲ್‌ನ್ನು ತನ್ನ ಆದರ್ಶವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರಿಗೇ ನೀಡುವಂತೆ ಇಲ್ಲಿಯ 15ರ ಹರೆಯದ ಬಾಲಕಿಯೋರ್ವಳು ಚುನಾವಣಾ ಆಯೋಗಕ್ಕೆ ತನ್ನ ರಕ್ತದಲ್ಲಿ ಪತ್ರವನ್ನು ಬರೆದಿದ್ದಾಳೆ.
10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಲಕಿ ಮತ್ತು ಆಕೆಯ ತಮ್ಮ ಪತ್ರವನ್ನು ಬರೆಯಲು ಸಿರಿಂಜ್ ಬಳಸಿ ತಮ್ಮ ದೇಹದಿಂದ ರಕ್ತವನ್ನು ತೆಗೆದಿದ್ದರು ಎಂದು ಈ ಮಕ್ಕಳ ತಂದೆ ಹೇಳಿದ್ದಾರೆ. ಪತ್ರವನ್ನು ಪೋಸ್ಟ್ ಮಾಡಲು ಮಕ್ಕಳು ಯತ್ನಿಸಿದ್ದರಾದರೂ ತಂದೆ ಅದನ್ನು ತಡೆದಿದ್ದಾರೆ.
ರಾಜಕೀಯ ಘಟನೆಗಳಿಂದ ಆಕರ್ಷಿತರಾಗದಂತೆ ಮತ್ತು ತಮ್ಮ ಓದಿನ ಕಡೆ ಗಮನ ಹರಿಸುವಂತೆ ತಾನು ಮಕ್ಕಳಿಗೆ ಬುದ್ಧಿ ಹೇಳಿದ್ದೇನೆ ಎಂದವರು ತಿಳಿಸಿದರು.
ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಎಸ್‌ಪಿ ಎರಡು ಹೋಳುಗಳಾಗಿದ್ದು, ಸೈಕಲ್ ಚಿಹ್ನೆಗಾಗಿ ಅಖಿಲೇಶ್ ಮತ್ತು ಅವರ ತಂದೆ ಮುಲಾಯಂ ಸಿಂಗ್ ಯಾದವ ಅವರ ಬಣಗಳು ಕಿತ್ತಾಟ ನಡೆಸುತ್ತಿವೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತಮಗೇ ನೀಡಬೇಕು ಎಂದು ಕೋರಿ ಇವೆರಡೂ ಬಣಗಳು ಚುನಾವಣಾ ಆಯೋಗಕ್ಕೆ ಅರ್ಜಿಗಳನ್ನು ಸಲ್ಲಿಸಿವೆ.
ಅಖಿಲೇಶರ ‘ಸಮಾಜವಾದಿ ಲ್ಯಾಪ್‌ಟಾಪ್ ಯೋಜನೆ ’ಬಗ್ಗೆ ಓದಿದ ನಂತರ ತನ್ನ ಮಕ್ಕಳು ಅವರನ್ನು ಇಷ್ಟಪಡತೊಡಗಿದ್ದರು ಎಂದು ತಂದೆ ಹೇಳಿದರು. ಈ ಯೋಜನೆ ಯಡಿ ಉತ್ತರ ಪ್ರದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದೆ.
ಅವರು ಉಚಿತ ಲ್ಯಾಪ್‌ಟಾಪ್ ಬಯಸಿದ್ದರು ಮತ್ತು ಅಖಿಲೇಶ್‌ರ ಗಮನ ಸೆಳೆಯಲು ಮುಂದಾಗಿದ್ದರು. ಯಾವುದೋ ವಿಷಯದಲ್ಲಿ ಸ್ಥಳೀಯ ಅಧಿಕಾರಿಗಳ ಗಮನವನ್ನು ಸೆಳೆಯಲು ವ್ಯಕ್ತಿಯೋರ್ವ ರಕ್ತದಲ್ಲಿ ಪತ್ರವೊಂದನ್ನು ಬರೆದಿದ್ದ ಎಂಬ ಸುದ್ದಿಯನ್ನು ಓದಿದ್ದ ಮಕ್ಕಳು ತಾವೂ ಹಾಗೆ ಮಾಡಲು ನಿರ್ಧರಿಸಿದ್ದರು ಎಂದರು.
ಮಕ್ಕಳು ಅಖಿಲೇಶ್ ಮತ್ತು ಎಸ್‌ಪಿ ಚಿಹ್ನೆಯ ಕುರಿತು ಕವನಗಳನ್ನು ರಚಿಸಿ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಅವುಗಳನ್ನು ಹಾಡಿದ್ದರು. ಪಕ್ಷದ ಆಡಳಿತವನ್ನು ಅಖಿಲೇಶ್‌ಗೆ ಒಪ್ಪಿಸುವಂತೆ ಮುಲಾಯಂ ಸಿಂಗ್ ಅವರನ್ನು ಉದ್ದೇಶಿಸಿಯೂ ಪತ್ರವನ್ನು ಬರೆದಿದ್ದರು.







