ಬಾಲಕಿಯರ ಸುರಕ್ಷತೆಗೆ ಅಗತ್ಯ ಕ್ರಮ: ಆಂಜನೇಯ ಭರವಸೆ
ವಸತಿ ನಿಲಯಗಳ ಶೋಚನೀಯ ಸ್ಥಿತಿ ಸಮೀಕ್ಷೆಯಿಂದ ಬಹಿರಂಗ

ಬೆಂಗಳೂರು, ಜ. 6: ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿನ ಬಾಲಕಿಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ನೇತೃತ್ವದ ನಿಯೋಗ ಸಲ್ಲಿಸಿದ ಸಮೀಕ್ಷಾ ವರದಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಹಾಸ್ಟೆಲ್ ವಿದ್ಯಾರ್ಥಿನಿಯರ ಸುರಕ್ಷತೆಗೆ ಸಿಸಿಟಿವಿ, ಮಹಿಳಾ ವಾರ್ಡನ್‌ಗಳು ಹಾಗೂ ಕಾವಲುಗಾರರ ನೇಮಕ ಸಂಬಂಧ ಕ್ರಮ ವಹಿಸಲಾಗುವುದು ಎಂದರು.
ಬಿಜೆಪಿ ನಿಯೋಗ ಸಲ್ಲಿಸಿರುವ ವರದಿ ಗಮನಿಸಿ ಹಾಸ್ಟೆಲ್‌ಗಳ ಸ್ಥಿತಿಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪತ್ರ ಮುಖೇನ ತಿಳಿಸುವುದು ಎಂದ ಅವರು, ಮಹಿಳಾ ವಾರ್ಡನ್‌ಗಳ ನೇಮಕ ಮಾಡಲು ಶೈಕ್ಷಣಿಕ ವರ್ಷದಿಂದಲೆ ಕ್ರಮ ಕೈಗೊಳ್ಳಲಾಗುವುದು. ಸ್ವಂತ ಕಟ್ಟಡಗಳ ನಿರ್ಮಾಣಕ್ಕೂ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶೋಚನೀಯ ಸ್ಥಿತಿ ಬಯಲು: ರಾಜ್ಯದ 1342 ವಸತಿ ನಿಲಯಗಳ ಪೈಕಿ 740 ವಸತಿ ನಿಲಯಗಳ ಸಮೀಕ್ಷೆಯನ್ನು ಬಿಜೆಪಿ ಮಹಿಳಾ ಮೋರ್ಚಾ ನಡೆಸಿದೆ. ಬಹುತೇಕ ವಿದ್ಯಾರ್ಥಿನಿಲಯಗಳಲ್ಲಿ ಶೌಚಾಲಯ, ಶುದ್ದ ಕುಡಿಯುವ ನೀರು, ಪೌಷ್ಟಿಕ ಆಹಾರ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಲ್ಲಿರುವುದು ಬೆಳಕಿಗೆ ಬಂದಿದೆ.
352 ವಸತಿ ನಿಲಯಗಳಲ್ಲಿ ಸ್ನಾನಗೃಹಗಳು ಮತ್ತು ಶೌಚಾಲಯಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿಲ್ಲ. ಇರುವ ಶೌಚಾಲಯಗಳಿಗೂ ಬಾಗಿಲುಗಳಿಲ್ಲ. ಅಗತ್ಯ ನೀರಿನ ವ್ಯವಸ್ಥೆ ಇಲ್ಲ. ಬಿಸಿ ನೀರಿನ ವ್ಯವಸ್ಥೆಯೂ ಇಲ್ಲ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ.
418 ವಸತಿ ನಿಲಯಗಳಲ್ಲಿ ಮಂಚ, ಮೇಜುಗಳಿಲ್ಲ. ಹೀಗಾಗಿ ಮಕ್ಕಳ ಚಳಿಗಾಲದಲ್ಲಿಯೂ ನೆಲದ ಮೇಲೆ ಮಲಗಬೇಕಾಗಿದೆ. 219 ವಸತಿ ನಿಲಯಗಳಲ್ಲಿ ಮಂಚಗಳಿದ್ದು, ದಿಂಬು-ಹೊದಿಕೆಗಳಿಲ್ಲ. ಹಾಸಿಗೆ, ಹೊದಿಕೆ ಇದ್ದರೂ ಸ್ವಚ್ಛತೆ ಇಲ್ಲ ಎಂಬುದು ಗೊತ್ತಾಗಿದೆ.
ಬಹುತೇಕ ಹಾಸ್ಟೆಲ್‌ಗಳಲ್ಲಿನ ಅಕ್ಕಿ ತಿನ್ನಲು ಯೋಗ್ಯವಲ್ಲ, ಶುದ್ಧ ಕುಡಿಯುವ ನೀರಿಲ್ಲ, ಊಟದ ಕೊಠಡಿ ಇಲ್ಲ, ಉಗ್ರಾಣ ಸೌಲಭ್ಯವಿಲ್ಲ. ಕಸ ವಿಲೇವಾರಿಯೂ ಸಮರ್ಪಕವಾಗಿಲ್ಲ. 286 ವಸತಿ ನಿಲಯಗಳಲ್ಲಿ ಹಗಲು ಕಾವಲುಗಾರರಿಲ್ಲ, 106 ಹಾಸ್ಟೆಲ್‌ಗಳಲ್ಲಿ ರಾತ್ರಿ ಕಾವಲುಗಾರರಿಲ್ಲ. 602 ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಇಲ್ಲ. ಕೆಲ ಹಾಸ್ಟೆಲ್‌ಗಳಲ್ಲಿ ರಕ್ಷಣೆ ಗೋಡೆ ಇಲ್ಲ ಎಂಬುದನ್ನು ಸಮೀಕ್ಷೆ ಬಯಲು ಮಾಡಿದೆ.
ರಾಜ್ಯದಲ್ಲಿನ ಎಲ್ಲ ವಿದ್ಯಾರ್ಥಿ ನಿಲಯಗಳಿಗೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿನಿಯರ ಎಲ್ಲ ಹಾಸ್ಟೆಲ್‌ಗಳಿಗೆ ಮಹಿಳಾ ವಾರ್ಡನ್ ನಿಯೋಜಿಸಬೇಕು. ಅಲ್ಲದೆ, ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿದೆ.
ಮೇಲ್ಮನೆ ಸದಸ್ಯ ತಾರಾ ಅನುರಾಧ, ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಾತಾ ಪಾಟೀಲ್, ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ್, ಕಾರ್ಯದರ್ಶಿಗಳಾದ ಎಂ.ಸಿ. ಲತಾ, ಕವಿತಾ ಜೈನ್, ಗೀತಾ ಧನಂಜಯ, ವನಿತಾ ನಾರಾಯಣ್, ಉಪಾಧ್ಯಕ್ಷೆ ಮಂಜುಳಾ ಮಂಜುನಾಥ್, ಪುತಲೀಬಾಯಿ, ಚಂದ್ರಿಕಾ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂ.ವರ್ಗ ಹಾಗೂ ವಸತಿ ನಿಲಯಗಳ ಸ್ಥಿತಿ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಬಿಜೆಪಿ ಮಹಿಳಾ ಮೋರ್ಚಾದಿಂದ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತದೆ’
-ಭಾರತಿ ಶೆಟ್ಟಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ







