‘ಯುನಿಟಿ ಇಸ್ಲಾಮಿಕ್ ಡೈರಿಯ ಆ್ಯಪ್ ’ ಅನಾವರಣ

ಮಂಗಳೂರು, ಜ.6: ಯುನಿಟಿ ಇಲ್ಮ್ ಸೆಂಟರ್ ವತಿಯಿಂದ ವೆಬ್‌ಸೈಟ್ ಮತ್ತು ಹೊಸ ಆ್ಯಪ್ ಒಳಗೊಂಡ ‘ಯುನಿಟಿ ಇಸ್ಲಾಮಿಕ್ ಡೈರಿ ಆ್ಯಪ್ ’ ಶುಕ್ರವಾರ ನಗರದ ಐಎಂಎ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.
ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಅಧ್ಯಕ್ಷ ಹಾಗು ಲಕ್ನೋದ ನದ್ವತುಲ್ ಉಲಮಾದ ರೆಕ್ಟರ್ ಹಝ್ರತ್ ಮೌಲಾನಾ ಸೈಯದ್ ಮುಹಮ್ಮದ್ ರಾಬೇಅ್ ಹಸನಿ ನದ್ವಿ ‘ಯುನಿಟಿ ಇಸ್ಲಾಮಿಕ್ ಡೈರಿ ಆ್ಯಪ್ ’ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜನನ ಮತ್ತು ಮರಣದ ನಡುವಿನ ಬದುಕು ಉತ್ತಮವಾಗಬೇಕು ಎಂಬುದು ಎಲ್ಲರ ಇಚ್ಛೆಯಾಗಿದೆ. ಮುಸ್ಲಿಮನೊಬ್ಬನ ಜೀವನ ಈಮಾನ್‌ನಿಂದ ಕೂಡಿರಬೇಕು. ಅದಕ್ಕಾಗಿ ಸಮಯಕ್ಕೆ ಮಹತ್ವ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುನಿಟಿ ಇಲ್ಮ್ ಸೆಂಟರ್ ಪ್ರಸ್ತುತ ಪಡಿಸಿರುವ ಈ ವೆಬ್ ಮತ್ತು ಆ್ಯಪ್‌ನ್ನು ಬಳಸಿಕೊಳ್ಳಬೇಕು ಎಂದರು.
ಅಲ್-ರೈದ್ ಅರಬಿಕ್ ಮ್ಯಾಗಝಿನ್‌ನ ಪ್ರಧಾನ ಸಂಪಾಕ ಮೌಲಾನಾ ಸೈಯದ್ ವಾಝಿ ರಶೀದ್ ಹಸನಿ ಶುಭ ಹಾರೈಸಿದರು.
ಯುನಿಟಿ ಹೆಲ್ತ್ ಸೆಂಟರ್‌ನ ಅಧ್ಯಕ್ಷ ಹಾಗು ನಿರ್ದೇಶಕ ಡಾ.ಸಿ.ಪಿ. ಹಬೀಬ್ ರಹ್ಮಾನ್ ಸ್ವಾಗತಿಸಿದರು.
ಹಾಫಿಝ್ ಮುಹಮ್ಮದ್ ಇಬಾದ್ ಕಿರಾಅತ್ ಪಠಿಸಿದರು.
ಮೌಲಾನಾ ಸಿರಾಜ್ ನದ್ವಿ ಅನುವಾದಿಸಿದರು.
ಮೌಲಾನಾ ಫುಝೈಲ್ ನದ್ವಿ ವಂದಿಸಿದರು.
ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.
ಆ್ಯಪ್ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಪ್ರಸ್ತಾವಿಸಿದ ಡಾ.ಸಿ.ಪಿ. ಹಬೀಬ್ ರಹ್ಮಾನ್ , ತನ್ನ ಕೆಲವು ವರ್ಷಗಳ ಹಿಂದಿನ ಈ ಯೋಜನೆ ಇಂದು ನನಸಾಗುತ್ತಿರುವುದು ನನಗೆ ಹರ್ಷವನ್ನುಂಟು ಮಾಡುತ್ತಿದೆ. ಆಧುನಿಕ ಜೀವನ ವ್ಯವಸ್ಥೆಯು ಇಸ್ಲಾಮಿಕ್ ಜೀವನ ವ್ಯವಸ್ಥೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದರು.
ಆ್ಯಪ್‌ನಲ್ಲಿ ಖಿಬ್ಲಾ ದಿಕ್ಸೂಚಿ, ನಮಾಝ್ ಸಮಯ, ಪ್ರಾರ್ಥನೆ, ಇಸ್ಲಾಮಿಕ್ ಆಡಿಯೋಗಳಲ್ಲದೆ ದಿನದ 24 ಗಂಟೆಯೂ ಇಸ್ಲಾಮಿಕ್ ಜೀವನ ಕ್ರಮದ ಮಾಹಿತಿಗಳು, 11 ಇಸ್ಲಾಮೀ ತತ್ವಗಳು, ಇಸ್ಲಾಮಿಕ್ ನುಡಿಮುತ್ತುಗಳು, ಬದುಕಿನ ಜೀವನ ಕ್ರಮದ ಕುರಿತು ಮಾಸಿಕ ಅಥವಾ ಜೀವಿತಾವಧಿ ಯೋಜನೆ ಇತ್ಯಾದಿ ಅಳವಡಿಸಲಾಗಿದೆ.







