ಮರಿಜುವಾನ ಸೇವನೆ ಹಕ್ಕಿಗಾಗಿ ಟ್ರಂಪ್ ಅಧಿಕಾರ ಸ್ವೀಕಾರದಂದು ವಿಶಿಷ್ಟ ಪ್ರತಿಭಟನೆ

ವಾಶಿಂಗ್ಟನ್, ಜ. 6: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುವ ದಿನದಂದು 4,200 ಮರಿಜುವಾನ ಸಿಗರೆಟ್‌ಗಳನ್ನು ವಿತರಿಸಲು ಮರಿಜುವಾನ ಸೇವನೆ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಜನರ ಗುಂಪೊಂದು ನಿರ್ಧರಿಸಿದೆ.
ಮರಿಜುವಾನ ಸೇವನೆ ಮೇಲೆ ಟ್ರಂಪ್ ಆಡಳಿತ ಸಂಪೂರ್ಣ ನಿಷೇಧ ಹೇರಬಹುದು ಎಂಬ ಭೀತಿಯನ್ನು ಮಾದಕ ದ್ರವ್ಯ ಸೇವನೆ ಪ್ರಿಯರು ಹೊಂದಿದ್ದಾರೆ.
2015ರ ಫೆಬ್ರವರಿ ಬಳಿಕ, ಒಂದು ಮನೆಯಲ್ಲಿ ಆರು ಮರಿಜುವಾನ ಗಿಡಗಳನ್ನು ಬೆಳೆಸುವುದು ಹಾಗೂ 21 ವರ್ಷ ಮೀರಿದ ವ್ಯಕ್ತಿಗಳು ಎರಡು ಔನ್ಸ್‌ಗಳಷ್ಟು ಮರಿಜುವಾನವನ್ನು ಹೊಂದುವುದು ಕಾನೂನುಬದ್ಧವಾಗಿದೆ.ಆದರೆ, ಅದನ್ನು ಸಾರ್ವಜನಿಕ ಸ್ಥಳದಲ್ಲಿ ಸೇದುವುದು ಅಪರಾಧವಾಗಿದೆ. ವಿಶೇಷವಾಗಿ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುವುದಾಗಲಿ, ಖರೀದಿಸುವುದಾಗಲಿ ನಿಷಿದ್ಧ.
ಹಾಗಾಗಿ, ಮರಿಜುವಾನದ ಕಾನೂನುಬದ್ಧತೆ ವಾಶಿಂಗ್ಟನ್‌ನಲ್ಲಿ ಈಗಾಗಲೇ ಕ್ಷೀಣವಾಗಿದೆ. ಮರಿಜುವಾನವನ್ನು ಕಾನೂನುಬಾಹಿರಗೊಳಿಸಲು ರಿಪಬ್ಲಿಕನ್ ನೇತೃತ್ವದ ಕಾಂಗ್ರೆಸ್ ಮತ ಹಾಕಿದರೆ, ವಾಶಿಂಗ್ಟನ್‌ನಲ್ಲಿ ಅದರ ಇತಿಶ್ರೀಯಾದಂತೆಯೇ.‘‘ಟ್ರಂಪ್ ಅಧಿಕಾರ ಸ್ವೀಕಾರ ದಿನದಂದು ಮರಿಜುವಾನ ವಿತರಿಸುವ ಮೂಲಕ ನಾವು ಹೋರಾಟವೊಂದಕ್ಕೆ ಚಾಲನೆ ನೀಡಲಿದ್ದೇವೆ’’ ಎಂದು ‘ಡಿಸಿ ಮರಿಜುವಾನ ಕೋಯಲೀಶನ್’ ಸ್ಥಾಪಕ ಆ್ಯಡಮ್ ಐಡಿಂಗರ್ ಹೇಳುತ್ತಾರೆ.
‘‘ನಾವು ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ’’ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.
2014ರಲ್ಲಿ ಐಡಿಂಗರ್ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹ ನಡೆದಿತ್ತು. ಮರಿಜುವಾನ ಸೇವನೆ ಹಕ್ಕಿಗಾಗಿ ಜನರು ಮತ ಚಲಾಯಿಸಿದ್ದರು.







