ಮನಪಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಮೂರು ತಿಂಗಳ ಕಾಲ ಪ್ರತಿಭಟನೆ
ಮಂಗಳೂರು,ಜ.6:ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಪಟ್ಟಿಯನ್ನು ತಕ್ಷಣ ಪ್ರಕಟಿಸಬೇಕು ಮತ್ತು ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆಯನ್ನು ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿ ಜನರ ಹಕ್ಕಿಗಾಗಿ ಜನವರಿ 9ರಿಂದ ಮೂರು ತಿಂಗಳ ಕಾಲ 16 ಕಡೆಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಮಂಗಳೂರು ನಗರ ನಿವೇಶನ ರಹಿತರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಿವೇಶನ ರಹಿತರಿಗೆ ಶಕ್ತಿನಗರದಲ್ಲಿ ಜಿ+3 ಮಾದರಿಯ ಮನೆಗಳನ್ನು ನಿರ್ಮಿಸುವುದಾಗಿ ಕೇವಲ 1100 ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.ಆದರೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ಪಟ್ಟಿ ಬಿಡುಗಡೆ ಮಾಡಲಾಗಿಲ್ಲ.ಕಳೆದ ಐದಾರು ದಶಕಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಾಕಷ್ಟು ಮಂದಿ ಬಡ ನಿವೇಶನ ರಹಿತರನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ.ಕಳೆದ ಒಂದುವರ್ಷದ ಅವಧಿಯಲ್ಲಿ ಹೆಸರು ನೋಂದಾಯಿಸಿದವರ ಹೇಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಮನಪಾ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಎಲ್ಲರ ಪಟ್ಟಿಯನ್ನು ತಕ್ಷಣ ಪ್ರಕಟಿಸಬೇಕು,ಅನರ್ಹರನ್ನು ಪಟ್ಟಿಯಿಂದ ಕೈ ಬಿಡಬೇಕು ಮತ್ತು ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಕಾರಣರಾದ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು,ಎಲ್ಲಾ ಅರ್ಹನಿವೇಶನ ರಹಿತರ ಹೆಸರನ್ನು ಪಟ್ಟಿಯಲ್ಲಿ ಸೇರಿಸಬೇಕು ಇದರಲ್ಲಿ ಕಡು ಬಡವರಿಗೆ ಮೊದಲ ಆದ್ಯತೆ ನೀಡಬೇಕು, ಪ.ಜಾತಿ, ಪ.ಪಂ, ವಿಕಲಾಂಗ,ವಿಧವೆಯರಿಗೆ ಪ್ರಾಶಸ್ತ್ಯ ನೀಡಬೇಕು.ನಿವೇಶನ ರಹಿತರ ಹೋರಾಟ ಸಮಿತಿದ್ವಿಪಕ್ಷೀಯ ಸಭೆಯನ್ನು ತಕ್ಷಣ ನಿಗದಿ ಪಡಿಸಬೇಕು.ಜನವರಿ 9ರಿಂದ ಮಾರ್ಚ್13ರವರೆಗೆ ಪಾಲಿಕೆಯ ವಿವಿಧ ವಾರ್ಡ್‌ಗಳಲ್ಲಿ ನಿವೇಸನ ರಹಿತರ ಹೋರಾಟ ನಡೆಯಲಿದ್ದು ಮಾರ್ಚ್ 13ರಂದು ಮನಪಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು .
ಕಳೆದ ನವೆಂಬರ್ 17ರಂದು ಜೈಲ್ ಬರೋ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ದಕ್ಷಿಣ ವಿಧಾನ ಸಭಾಕ್ಷೇತ್ರದ ಶಾಸಕರು ಕಾಮಗಾರಿಯನ್ನು ಒಂದು ತಿಂಗಳ ಆರಂಭಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ನಿವೇಶನ ರಹಿತರ ಪಟ್ಟಿಯನ್ನು ಡಿ.19ರಂದು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರೂ ಇದುವರೆಗೂ ಆ ಕೆಲಸ ಆಗಿಲ್ಲ ಎಂದು ಸಂತೊಷ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಂಗಳೂರು ದಕ್ಷಿಣ ಸಿಪಿಎಂ ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಪಿಎಂ ನಗರ ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ, ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮ ನಾಥ ಜಲ್ಲಿ ಗುಡ್ಡೆ,ಖಜಾಂಜಿ ಪ್ರಭಾವತಿ ಬೋಳಾರ,ಕಾರ್ಯದರ್ಶಿ ನೂತನ್ ಕೊಂಚಾಡಿ,ಉಪಾಧ್ಯಕ್ಷೆ ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.







