ಒಬಾಮ ಆಡಳಿತದಲ್ಲಿ ಭಾರತದೊಂದಿಗೆ ‘ವ್ಯೆಹಾತ್ಮಕ ಭಾಗೀದಾರಿಕೆ’ಯ ಬೆಸುಗೆ : ಜಾನ್ ಕೆರಿ

ವಾಶಿಂಗ್ಟನ್, ಜ. 5: ಒಬಾಮ ಆಡಳಿತದ ಎಂಟು ವರ್ಷಗಳ ಅವಧಿಯಲ್ಲಿ ಅಮೆರಿಕ ಭಾರತದೊಂದಿಗೆ ‘ವ್ಯೆಹಾತ್ಮಕ ಭಾಗೀದಾರಿಕೆ’ಯನ್ನು ಬೆಸೆದಿದೆ ಹಾಗೂ ಇದೇ ಅವಧಿಯಲ್ಲಿ ಜಗತ್ತಿನಲ್ಲಿ ಅಮೆರಿಕದ ಸ್ಥಾನದಲ್ಲಿ ಗಮನಾರ್ಹ ವೃದ್ಧಿಯಾಗಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಜಾನ್ ಕೆರಿ ಹೇಳಿದ್ದಾರೆ.
‘‘ಏಶ್ಯದಲ್ಲಿ ನಾವು ನಮ್ಮ ಸ್ನೇಹಿತರೊಂದಿಗೆ ಜೊತೆಯಾಗಿ ನಿಂತಿದ್ದೇವೆ. ಉತ್ತರ ಕೊರಿಯದ ಮೇಲಿನ ದಿಗ್ಬಂಧನವನ್ನು ಬಿಗಿಗೊಳಿಸಿದ್ದೇವೆ, ಪ್ರಾದೇಶಿಕ ಕ್ಷಿಪಣಿ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿದ್ದೇವೆ, ದಕ್ಷಿಣ ಚೀನಾ ಸಮುದ್ರದಲ್ಲಿ ಕಾನೂನಿನ ಆಡಳಿತವನ್ನು ಬೆಂಬಲಿಸಿದ್ದೇವೆ ಹಾಗೂ ಭಾರತದೊಂದಿಗೆ ವ್ಯೆಹಾತ್ಮಕ ಭಾಗೀದಾರಿಕೆಯನ್ನು ಬೆಸೆದಿದ್ದೇವೆ. ಇದೇ ಅವಧಿಯಲ್ಲಿ ವಿಯೆಟ್ನಾಂ ಜೊತೆಗಿನ ನಮ್ಮ ಸಂಬಂಧವನ್ನು ವೃದ್ಧಿಸಿಕೊಂಡಿದ್ದೇವೆ ಹಾಗೂ ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಹಾಗೂ ಅಲ್ಲಿ ಮೊದಲ ಬಾರಿಗೆ ಪ್ರಜಾಸತ್ತಾತ್ಮಕ ಸರಕಾರವೊಂದು ಅಸ್ತಿತ್ವಕ್ಕೆ ಬಂದಿದೆ’’ ಎಂದರು.
ಅಧಿಕಾರದಿಂದ ಕೆಳಗಿಳಿಯಲು ಎರಡು ವಾರಗಳಿರುವಾಗ, ವಿದೇಶ ಇಲಾಖೆಯ ಪ್ರಧಾನ ಕಚೇರಿಯಲ್ಲಿ ವಿದೇಶ ಕಾರ್ಯದರ್ಶಿಯಾಗಿ ತನ್ನ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಅವರು ಗುರುವಾರ ಮಾತನಾಡುತ್ತಿದ್ದರು.
ಕಳೆದ ಎಂಟು ವರ್ಷಗಳಲ್ಲಿ ಒಬಾಮ ಸರಕಾರ ಅನುಸರಿಸಿದ ನೀತಿಗಳ ಫಲವಾಗಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ಸ್ಥಾನಮಾನ 2009ರ ಆದಿಭಾಗದಲ್ಲಿ ಇದ್ದುದಕ್ಕಿಂತ ಉತ್ತಮಗೊಂಡಿದೆ ಎಂದರು.
ಸೈಬರ್ ದಾಳಿ: ನಾನು, ಒಬಾಮ ರಶ್ಯಕ್ಕೆ ದೂರು ನೀಡಿದ್ದೇವೆ: ಕೆರಿ
ಅಮೆರಿಕದ ಚುನಾವಣೆಯಲ್ಲಿ ರಶ್ಯದ ಗುಪ್ತಚರ ಸಂಸ್ಥೆಗಳು ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ತಾನು ಮತ್ತು ಅಧ್ಯಕ್ಷ ಬರಾಕ್ ಒಬಾಮ ಇಬ್ಬರೂ ರಶ್ಯದ ನಾಯಕರಿಗೆ ವೈಯಕ್ತಿಕವಾಗಿ ದೂರು ನೀಡಿದ್ದೇವೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಜಾನ್ ಕೆರಿ ಹೇಳಿದರು.
ರಶ್ಯವು ಅಮೆರಿಕದ ರಾಜಕೀಯ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸುತ್ತಿದೆ ಎಂಬುದಾಗಿ ನವೆಂಬರ್ 8ರಂದು ನಡೆದ ಚುನಾವಣೆಯ ಮೊದಲು ಶ್ವೇತಭವನ ಯಾಕೆ ಆರೋಪಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕೆರಿ, ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲು ಯತ್ನಿಸುತ್ತಿದೆ ಎಂಬ ಆರೋಪವನ್ನು ಎದುರಿಸಲು ಶ್ವೇತಭವನ ಬಯಸಲಿಲ್ಲ ಎಂದರು.







