ಕಯ್ಯಾರರಿಗೆ ನಾಡು ನುಡಿ ಬಗ್ಗೆ ಅಪಾರ ಕಾಳಜಿ: ನಿಸಾರ್ ಅಹಮದ್

ಉಡುಪಿ, ಜ.6: ನಾಡು ನುಡಿಯ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದ ಕಯ್ಯಾರ ಕಿಂಞಣ್ಣ ರೈ ಕನ್ನಡ ಜನತೆಯ ಮೇಲೆ ಅಪಾರ ಪ್ರೀತಿ ವಿಶ್ವಾಸವನ್ನು ಹೊಂದಿದ್ದರು ಎಂದು ಪದ್ಮಶ್ರೀ ಪುರಸ್ಕೃತ ಕವಿ ನಾಡೋಜ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಉಡುಪಿ ಅಮೋಘ ಮತ್ತು ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಯ್ಯಾರರ ಬದುಕು ಬರಹ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಯ್ಯಾರರ ಬದುಕು ವಿಷಯದ ಕುರಿತು ಉಪನ್ಯಾಸ ನೀಡಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ಕಯ್ಯಾರರ ಬದುಕೇ ದೊಡ್ಡ ಕಾವ್ಯ. ನುಡಿದಂತೆ ನಡೆದ ಶ್ರೇಷ್ಠ ಕವಿ. ನಾಡು ನುಡಿ ಬಗ್ಗೆ ಸಾಕಷ್ಟು ಚಿಂತನೆಯನ್ನು ಹೊಂದಿದ್ದ ಅವರು, 16ವರ್ಷಗಳ ಕಾಲ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಭಿವೃದ್ಧಿಯ ಹರಿಕಾರರಾಗಿ ಹೆಸರು ಗಳಿಸಿದ್ದರು ಎಂದರು.
ಭಾವುಕ ಜೀವಿಯಾಗಿ ಬಹುಮುಖ ಆಯಾಮಗಳಲ್ಲಿ ಬದುಕಿದ ಕಯ್ಯಾರರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡಬೇಕಾಗಿದೆ. ಅವರ ಸಾಹಿತ್ಯವನ್ನು ಓದುದರಿಂದ ತಮ್ಮ ಬದುಕಿಗೆ ಸ್ಫೂರ್ತಿಯಾಗಲಿದೆ. ಅವರ ಪ್ರೇರಣೆಯಿಂದ ಬದುಕು ಹಸನಾಗಲು ಸಾಧ್ಯ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯ ವಹಿಸಿದ್ದರು.
ಮಂಗಳೂರು ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ‘ಕಯ್ಯಾರರ ಕಾವ್ಯ’ ವಿಷಯ ಕುರಿತು ಉಪನ್ಯಾಸ ನೀಡಿದರು. ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಆಶಯ ಭಾಷಣ ಮಾಡಿದರು.
ಕಯ್ಯರ ಕಿಂಞಣ್ಣ ರೈ ಅವರ ಮಗಳು ದೇವಕಿದೇವಿ, ಅಳಿಯ ಭುವನ ಪ್ರಸಾದ್ ಹೆಗ್ಡೆ, ಮಂಗಳೂರು ವಿವಿ ಶೈಕ್ಷಣಿಕ ಮಂಡಳಿಯ ಸದಸ್ಯ ಅಮೃತ್ ಶೆಣೈ, ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ., ನಗರಸಭೆ ಸದಸ್ಯೆ ಗೀತಾ ಶೇಟ್, ಇಂದು ರಮಾನಂದ ಭಟ್ ಉಪಸ್ಥಿತರಿದ್ದರು.
ಅಮೋಘ ನಿರ್ದೇಶಕಿ ಪೂರ್ಣಿಮಾ ಸುರೇಶ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







