ತುಂಬೆಯಲ್ಲಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಸಮರ್ಪಕವಾಗಿದೆ : ಮೇಯರ್ ಹರಿನಾಥ್
ಮನಪಾ ದಿಂದ ವಿವಿಧ ಕಡೆಗಳ ನೀರಿನ ಮಾದರಿ ಪರೀಕ್ಷೆ

ಮಂಗಳೂರು,ಜ.6:ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತುಂಬೆಯಿಂದ ನೀರನ್ನು ಶುದ್ಧೀಕರಿಸಿ ಬಳಿಕ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಮಾಜಿ ಸಚಿವರಾಗಿರುವ ಪಾಲೆಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲೂ ಇದೇ ಕೇಂದ್ರದಿಂದ ಇದೇ ರೀತಿ ನೀರನ್ನು ಶುದ್ಧೀಕರಿಸಿ ನೀಡಲಾಗುತ್ತಿತ್ತು; ಬದಲಾವಣೆಯಾಗಿಲ್ಲ. ಒಂದು ವೇಳೆ ನೀರು ಸಂಸ್ಕರಣೆಯಲ್ಲಿ ದೋಷವಿದ್ದರೆ ಪಾಲೆಮಾರ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಏಕೆ ವೌನವಹಿಸಿದ್ದರು. ಕ್ರಮ ಕೈ ಗೊಳ್ಳಲಿಲ್ಲವೇಕೆ ?ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ನೇತ್ರಾವತಿ ನದಿಯ ನೀರನ್ನು ನೇರವಾಗಿ ಜನರಿಗೆ ಕುಡಿಯಲು ಸರಬರಾಜು ಮಾಡುವುದಿಲ್ಲ. ತುಂಬೆಯಲ್ಲಿ ಅದನ್ನು ಸಂಸ್ಕರಿಸಿ ನೀಡಲಾಗುತ್ತದೆ. ಈ ಬಗ್ಗೆ ತುಂಬೆಯಲ್ಲಿ ಬಂದು ಪರಿಶೀಲಿಸಬಹುದು. ಈ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿದೆ ಪರಿಶೀಲಿಸಲಾಗುವುದು:
ಮನಪಾ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಸರಬರಾಜಾಗುತ್ತಿರುವ ತುಂಬೆಯಿಂದಲೇ ನೀರನ್ನು ಶುದ್ಧೀಕರಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಲುಷಿತಗೊಂಡಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ವಿವಿಧ ಕಡೆಗಳ ನೀರಿನ ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷೆಗೆ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಪತ್ರಿಕೆ ತಿಳಿಸಿದ್ದಾರೆ.







