ಆಹಾರ ವಲಯ ರಚಿಸಲು ಒತ್ತಾಯಿಸಿ ಆಹಾರ ಪದಾರ್ಥ ಮಾರಾಟಗಾರರಿಂದ ಧರಣಿ

ಮಂಗಳೂರು, ಜ.6: ನಗರದ ಹಲವೆಡೆ ಆಹಾರ ವಲಯಗಳನ್ನು ರಚಿಸಲು ಒತ್ತಾಯಿಸಿ ಆಹಾರ ಪದಾರ್ಥ ಮಾರಾಟಗಾರರು ಸಿಐಟಿಯು ಸಂಘಟನೆಗೆ ಸಂಯೋಜಿತಗೊಂಡ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಮಂಗಳೂರು ಮಹಾನಗರಪಾಲಿಕೆ ಕಚೇರಿಯ ಎದುರು ಶುಕ್ರವಾರ ಧರಣಿ ನಡೆಸಿದರು.
ಆಹಾರ ಪದಾರ್ಥ ಮಾರಾಟಗಾರರು ಬಳ್ಳಾಲ್‌ಬಾಗ್ ಜಂಕ್ಷನ್‌ನಿಂದ ಮೆರವಣಿಗೆ ಹೊರಟು ಆಹಾರ ವಲಯಗಳನ್ನು ರಚಿಸಿರಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿರಿ, ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳನ್ನು ರಕ್ಷಿಸಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಮನಪಾ ಕಚೇರಿಗೆ ತೆರಳಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗು ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ‘ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಉತ್ತಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಬೀದಿಬದಿ ವ್ಯಾಪಾರಸ್ಥರು ಹಲವು ವರ್ಷಗಳಿಂದ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಆದರೆ ಸ್ಥಾಪಿತ ಹಿತಾಸಕ್ತಿಗಳು ದುರುದ್ದೇಶದಿಂದಲೇ ವಿನಾ ಕಾರಣ ಸುಳ್ಳು ಆರೋಪಗಳನ್ನು ಹೊರಿಸಿ ಆಹಾರ ಪದಾರ್ಥ ಮಾರಾಟಗಾರರನ್ನು ಧಮನಿಸಲು ಕುತಂತ್ರ ಹೆಣೆಯುತ್ತವೆ ಎಂದು ಆರೋಪಿಸಿದರು.
ನಗರದ ಪಂಪ್‌ವೆಲ್, ಕಂಕನಾಡಿ, ಬಾವುಟಗುಡ್ಡೆ, ಕದ್ರಿಪಾರ್ಕ್, ಕದ್ರಿ ಮಲ್ಲಿಕಟ್ಟೆ, ಹಳೆ ಬಸ್‌ಸ್ಟ್ಯಾಂಡ್, ಸರ್ವಿಸ್ ಬಸ್‌ಸ್ಟ್ಯಾಂಡ್, ಟೆಂಪೋ ಪಾರ್ಕ್, ರೈಲ್ವೆ ಸ್ಟೇಷನ್ ಬಳಿ ಆಹಾರ ವಲಯಗಳನ್ನು ರಚಿಸಬೇಕು ಎಂದು ಸುನೀಲ್ ಕುಮಾರ್ ಬಜಾಲ್ ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್., ಆಹಾರ ಪದಾರ್ಥ ಮಾರಾಟಗಾರರ ಉಪಸಮಿತಿಯ ಪ್ರಧಾನ ಸಂಚಾಲಕ ಹರೀಶ್ ಪೂಜಾರಿ ಮಾತನಾಡಿದರು.
ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಶಕ್ತಿನಗರ, ಸಂಘದ ಜಿಲ್ಲಾ ಮುಖಂಡರಾದ ಮುಹಮ್ಮದ್ ಮುಸ್ತಫಾ, ಅಥಾವುಲ್ಲ, ಮುಹಮ್ಮದ್ ಆಸಿಫ್, ಮೇರಿ ಡಿಸೋಜ, ಸಿಕಂದರ್, ನೌಷಾದ್ ಹಾಗೂ ಉಪಸಮಿತಿಯ ಮುಖಂಡರಾದ ಅಣ್ಣಯ್ಯ ಕುಲಾಲ್, ಶ್ರೀಧರ, ಕಿಶೋರ್ ಕುಮಾರ್ ವಹಿಸಿದ್ದರು.







