ಪ್ರವಾದಿ ಶಿಷ್ಟಾಚಾರ ಜೀವನದಲ್ಲಿ ಅಳವಡಿಸಿಕೊಳ್ಳಿ: ಅತರ್ ಖಾನ್
ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ನಿಂದ ಪ್ರವಾದಿ ಸಂದೇಶ

ಮಂಗಳೂರು, ಜ.6: ಜೀವನದ ಪ್ರತಿ ಹಂತದಲ್ಲೂ ಮುಹಮ್ಮದ್ (ಸ) ಅವರ ಜೀವನ ಶಿಷ್ಟಾಚಾರವನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಸ್ಫೂರ್ತಿಯಾಗಬೇಕು ಎಂದು ಅಲ್ ಅಸ್ರ್ ಫೌಂಡೇಶನ್‌ನ ಸಿಇಓ ಅತರ್ ಖಾನ್ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಅವರು ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ದಾವಾ ಸೆಲ್ ವತಿಯಿಂದ ನಗರದ ಪುರಭವನದಲ್ಲಿ ಇಂದು ಸಂಜೆ ನಡೆದ ‘ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶ’ವಿಷಯದ ಕುರಿತು ಮಾತನಾಡಿದರು.
ಕೇವಲ ಮುಸ್ಲಿಮನ ಹೆಸರಿರುವುದಕ್ಕೆ ಪರಿಪೂರ್ಣನಾಗಲು ಸಾಧ್ಯವಿಲ್ಲ. ಪವಿತ್ರ ಕುರ್‌ಆನ್‌ನ ಸಂದೇಶ ಮತ್ತು ಪ್ರವಾದಿ ಬೋಧನೆಗಳ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪರಿಪೂರ್ಣ ಮುಸ್ಲಿಮನಾಗಲು ಸಾಧ್ಯವಿದೆ. ಇದು ಇತರರಿಗೂ ಸ್ಫೂರ್ತಿಯಾಗಬಹುದು. ಪ್ರವಾದಿ ಮುಹಮ್ಮದ್ (ಸ) ಅವರ ಸನ್ನಡತೆ ಮತ್ತು ಪ್ರಾಮಾಣಿಕತೆಯೇ ಅರಬೇತರರಿಗೆ ಸ್ಫೂರ್ತಿಯಾಗಿದ್ದವು. ಪ್ರವಾದಿ (ಸ)ರ ಇಂತಹ ಸನ್ನಡತೆಗೆ ಪ್ರೇರಣೆಯಾಗಿರುವ ಧರ್ಮದ (ಇಸ್ಲಾಂ) ಬಗ್ಗೆ ತಿಳಿಯಲು ಕುತೂಹಲ ಇದ್ದವು. ಆದ್ದರಿಂದಲೇ ಅಸಂಖ್ಯಾತರ ಸಂಖ್ಯೆಯಲ್ಲಿ ಅರಬೇತರರೂ ಇಸ್ಲಾಮನ್ನು ಸ್ವೀಕರಿಸಿರುವ ನಿದರ್ಶನಗಳಿವೆ ಎಂದರು.
ಇಸ್ಲಾಮಿನ ಪರಿಪೂರ್ಣ ಜ್ಞಾನದ ಕೊರತೆ ಇಂದು ಸಮಾಜವನ್ನು ಕಾಡುತ್ತಿದೆ. ಜೀವನದ ಪ್ರತಿ ಸಮಸ್ಯೆಗೂ ಇಸ್ಲಾಮಿನಲ್ಲಿ ಪರಿಹಾರವಿದೆ. ತಮಗಿಷ್ಟದ್ದನ್ನು ಮಾತ್ರ ಸ್ವೀಕರಿಸುವುದು ಮತ್ತು ತನ್ನ ಇಷ್ಟದ ವಿರುದ್ಧವಾದುದನ್ನು ತಿರಸ್ಕಸುವುದು ಧರ್ಮವಲ್ಲ. ಧರ್ಮ ಸಮ್ಮತವಾದ ಮತ್ತು ಧರ್ಮಬಾಹಿರವಾದ ವಿಷಯಗಳಿಗೆ ಇಸ್ಲಾಂ ಪ್ರಾಧ್ಯಾನ್ಯತೆಯನ್ನು ನೀಡಿದೆ. ಆದ್ದರಿಂದ ನಮ್ಮ ದೈನಂದಿನ ನಡವಳಿಕೆಯಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ಕುರ್‌ಆನ್ ಮತ್ತು ಪ್ರವಾದಿಯವರ ಜೀವನ ಶಿಷ್ಟಾಚಾರ ಅಳವಡಿಸಿಕೊಂಡರೆ ಜೀವನದಲ್ಲಿ ಬದಲಾವಣೆ ತರಲು ಸಾಧ್ಯದ ಜೊತೆಗೆ ಇತರರಿಗೂ ಸ್ಫೂರ್ತಿದಾಯಕವಾಗಲಿದೆ ಎಂದರು.
ಡಿಸ್ಕವರ್ ಇಸ್ಲಾಂ ಎಜುಕೇಶನಲ್ ಟ್ರಸ್ಟ್‌ನ ಸಿಇಓ ಉಮರ್ ಶರೀಫ್ ಮಾತನಾಡಿ, ಮಾನವೀಯತೆಯ ಇನ್ನೊಂದು ಹೆಸರೇ ಇಸ್ಲಾಂ ಆಗಿದೆ. ಬದುಕಿನ ಸ್ವಾತಂತ್ರದೊಂದಿಗೆ ಮಾನವೀಯತೆಗೆ ಒತ್ತು ನೀಡುವುದು ಕೂಡ ಧರ್ಮದ ಒಂದು ಅಂಶವಾಗಿದೆ ಎಂದರು.
ಇಸ್ಲಾಮನ್ನು ಐಸಿಸ್‌ನೊಂದಿಗೆ ಮೆಲುಕು ಹಾಕುವ ಮಾಧ್ಯಮಗಳ ಧೋರಣೆಗೆ ಇದೇ ಸಂದರ್ಭದಲ್ಲಿ ಅವರು ವಿಷಾದ ವ್ಯಕ್ತಪಡಿಸಿದರು.
ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ನಾಝಿಮ್ ಎಸ್.ಎಸ್. ಅಧ್ಯಕ್ಷತೆ ವಹಿಸಿದ್ದರು. ದಾವಾ ಸೆಲ್‌ನ ಕನ್ವೀನರ್ ಮುಹಮ್ಮದ್ ಹನೀಫ್ ಪಿ.ಎಸ್., ಕತಾರ್ ಘಟಕದ ಅಧ್ಯಕ್ಷ ಮುಹಮ್ಮದ್ ಫಹೀಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







