ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್
ಸುಳ್ಯ, ಜ.6 : ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶದಿಂದ ಅಪಪ್ರಚಾರ ನಡೆಸುವವರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಲು ಜನಜಾಗೃತಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿ ವೇದಿಕೆಯ ಅಧ್ಯಕ್ಷ ಡಾ.ಯು.ಪಿ.ಶಿವಾನಂದ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶದಿಂದ ನಿರಂತರ ಅಪಪ್ರಚಾರ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಲವರು ತಮಗೆ ಬಂದ ಸಂದೇಶಗಳನ್ನು ಅದು ಎಷ್ಟು ಸತ್ಯ ಎಂದು ಪರೀಕ್ಷೆ ಮಾಡುವ ಮೊದಲೇ ಹಲವರಿಗೆ ಅದನ್ನು ವರ್ಗಾಯಿಸುತ್ತಾರೆ. ಇದರಿಂದ ಸತ್ಯ ಮರೆಮಾಚಲ್ಪಡುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪಪ್ರಚಾರಕ್ಕೆ ಅದರ ಮೂಲಕವೇ ಸರ್ಜಿಕಲ್ ಸ್ಟ್ರೈಕ್ ಮಾಡಲು ಸುದ್ದಿ ವೇದಿಕೆಯಿಂದ ಜನಜಾಗೃತಿ ಹೋರಾಟ ನಡೆಸಲಾಗುತ್ತದೆ ಎಂದರು.
ಒಂದು ವೇಳೆ ಅಪಪ್ರಚಾರಕ್ಕಾಗಿ, ಅವಹೇಳನಕ್ಕಾಗಿ ಬ್ಲಾಕ್‌ಮೇಲ್ ಸಂದೇಶವೆಂದು ಕಂಡು ಬಂದರೆ ಕಳುಹಿಸಿದವರನ್ನು ಗುರುತಿಸಿ ಅದರಿಂದ ತೊಂದರೆಗೊಳಗಾಗುವವರಿಗೆ ತಿಳಿಸುವುದು, ತೊಂದರೆಗೊಳಗಾದವರಿಗೆ ರಕ್ಷಣೆಗೆ, ಬೆಂಬಲಕ್ಕೆ ತಮ್ಮ ಕೈಜೋಡಿಸುವುದು, ಆ ಸಂದೇಶ ಕಳುಹಿಸಿದವರನ್ನು ತಮ್ಮ ಗ್ರೂಪ್‌ನಿಂದ ತೆಗೆದು ಇತರರಿಗೆ ಅವರ ಬಗ್ಗೆ ತಿಳಿಸುವುದು. ಹೀಗೆ ಮಾಡಿದರೆ ತಮ್ಮ ಬಗ್ಗೆ ಅಥವಾ ಯಾರ ಬಗ್ಗೆಯಾದರೂ ಅಪಪ್ರಚಾರ ಅವಹೇಳನವಾದಾಗ ರಕ್ಷಣೆ ದೊರೆಯುತ್ತದೆ ಎಂದವರು ಹೇಳಿದರು.
ಅಪಪ್ರಚಾರ ಮಾಡಿದ್ದು ಯಾರೆಂದು ತಿಳಿಯದಿದ್ದರೆ ಅದನ್ನು ಪರಿಚಯದವರ ಹತ್ತಿರ ವಿಚಾರಿಸುವುದು. ಅವರ ಹತ್ತಿರ ಅವರಿಗೆ ಕಳುಹಿಸದವರು ಯಾರೆಂದು ತಿಳಿಯಲು ಕೇಳಿಕೊಳ್ಳುವುದು. ಅದೇ ರೀತಿ ಮೇಲೆ ಮೇಲೆ ಕೇಳುತ್ತಾ ಹೋದರೆ ಅದನ್ನು ಕಳುಹಿಸಿವರ ಮೂಲ ಉದ್ದೇಶ ಅರಿವಾಗುತ್ತದೆ. ಆ ಸಂದೇಶದಿಂದ ತೊಂದರೆಗೊಳಗಾದವರು ಮತ್ತು ಆ ಸಂದೇಶವನ್ನು ಸ್ವೀಕರಿಸಿದ ಎಲ್ಲರೂ ಮತ್ತು ಜನತೆ ಅಪಪ್ರಚಾರಕ್ಕೆ ಕಾರಣರಾದವರನ್ನು ಬಹಿರಂಗವಾಗಿ ಪ್ರಶ್ನಿಸಿ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡುವುದು ಇದರಿಂದ ಮುಂದಕ್ಕೆ ಅಪಪ್ರಚಾರಗಳು ನಡೆಯಲಾರದು ನಡೆದರೂ ಅದು ಹರಡಲಾರದು ಎಂದವರು ಹೇಳಿದರು.
ಸುದ್ದಿ ಬಿಡುಗಡೆ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







