ಕಾಮುಕರ ವಿರುದ್ಧ ಕ್ರಮಕ್ಕೆ ಮುಂದಾಗಲಿದೆಯೇ ಓಬವ್ವ ಪಡೆ?
ಬಿ. ರೇಣುಕೇಶ್
ಶಿವಮೊಗ್ಗ, ಜ. 6: ಇತ್ತೀಚೆಗೆ ಹೊಸ ವರ್ಷಾಚರಣೆಯ ವೇಳೆ ಬೆಂಗಳೂರಿನಲ್ಲಿ ಬೀದಿ ಕಾಮಣ್ಣರು ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ನಂತರ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಯಾಗುತ್ತಿದೆ. ವಿಶೇಷ ಪೊಲೀಸ್ ಪಡೆ ಅಸ್ತಿತ್ವಕ್ಕೆ ತರುವ ಚರ್ಚೆಗಳು ಸರಕಾರದ ಮಟ್ಟದಲ್ಲಿ ನಡೆಯಲಾರಂಭಿಸಿದೆ.
ಆದರೆ, ಬೀದಿ ಕಾಮಣ್ಣರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿ ಡಿ. ಚೆನ್ನಣ್ಣನವರ್ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿಶೇಷ ಪೊಲೀಸ್ ಪಡೆಗಳನ್ನು ಜಿಲ್ಲೆಯ ವಿವಿಧೆಡೆ ರಚನೆ ಮಾಡಿದ್ದರು. ಪೊಲೀಸ್ ಇಲಾಖೆಯ ಈ ಕ್ರಮವು ಇಡೀ ರಾಜ್ಯದ ಗಮನ ಸೆಳೆದಿತ್ತು. ವಿಶೇಷವಾಗಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಜನಪ್ರಿಯತೆ ಗಮನಿಸಿ, ಕೆಲ ಜಿಲ್ಲೆಗಳಲ್ಲಿಯೂ ಬೀದಿ ಕಾಮಣ್ಣರಿಗೆ ತಕ್ಕ ಶಾಸ್ತಿ ಮಾಡಲು ಪ್ರತ್ಯೇಕ ಪೊಲೀಸ್ ಪಡೆಗಳನ್ನು ಸ್ಥಳೀಯ ಪೊಲೀಸ್ ಇಲಾಖೆಗಳು ಆರಂಭಿಸಿದ್ದವು. ಈ ಪಡೆಗಳು ಬೀದಿ ಕಾಮಣ್ಣರಿಗೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದವು. ಅದರಲ್ಲಿಯೂ ಶಿವಮೊಗ್ಗ ನಗರದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ಓಬವ್ವ ಪಡೆಯಂತೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಪಡೆಯ ಪೊಲೀಸರು ನಗರದ ವಿವಿಧ ರಸ್ತೆ, ಶಾಲಾ - ಕಾಲೇಜು, ಬಸ್ ನಿಲ್ದಾಣ, ಸಿಟಿ ಬಸ್‌ಗಳಲ್ಲಿ ಮಫ್ತಿ ಬಟ್ಟೆಯಲ್ಲಿ ಬೀಡುಬಿಟ್ಟು ಬೀದಿ ಕಾಮಣ್ಣರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿತ್ತು. ಸರಿಸುಮಾರು 60 ಕ್ಕೂ ಅಧಿಕ ಬೀದಿ ಕಾಮಣ್ಣರನ್ನು ಈ ತಂಡ ವಶಕ್ಕೆ ಪಡೆದಿತ್ತು.
ಇದರಿಂದ ಬೀದಿ ಕಾಮಣ್ಣರು ತಮ್ಮ ವಿಕೃತ ಆಟಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕಿದ್ದರು. ಯುವತಿಯರು, ಮಹಿಳೆಯರು ಕೂಡ ಶಿವಮೊಗ್ಗ ನಗರದ ರಸ್ತೆಗಳಲ್ಲಿ ನೆಮ್ಮದಿಯಾಗಿ ಓಡಾಡುವಂತಾಗಿತ್ತು. ಹಿಂದಿನ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಈ ಪಡೆಯು ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡಲಿದೆ ಎಂದು ತಿಳಿಸಿದ್ದರು. ಆದರೆ, ಒಂದೆರೆಡು ತಿಂಗಳು ಸಕ್ರಿಯವಾಗಿದ್ದ ಈ ಪಡೆಯು ಇದೀಗ ಅಕ್ಷರಶಃ ನಿಸ್ತೇಜವಾಗಿದೆ.
ಕಾರ್ಯಚಟುವಟಿಕೆಯ ಮಾಹಿತಿಗಳೇ ಇಲ್ಲವಾಗಿದೆ. ಇದರಿಂದ ಬೀದಿ ಕಾಮಣ್ಣರು ಮತ್ತೆ ಇದೀಗ ತಮ್ಮ ವಿಕೃತ ಆಟಗಳನ್ನು ಶುರು ಮಾಡಲಾರಂಭಿಸಿದ್ದಾರೆ. ಯುವತಿಯರು, ಮಹಿಳೆಯರನ್ನು ಕಾಡಲಾರಂಭಿಸಿದ್ದಾರೆ.
ಗಮನಹರಿಸಬೇಕಾಗಿದೆ: ನಗರದ ಪ್ರಮುಖ ಬಸ್ ನಿಲ್ದಾಣ, ಶಾಲಾ-ಕಾಲೇಜುಗಳ ರಸ್ತೆಗಳು, ಜನನಿಬಿಡ ಸ್ಥಳಗಳಲ್ಲಿ ಕೆಲ ಪುಂಡ-ಪೋಕರಿಗಳು ಯುವತಿಯರು-ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿದೆ. ಬೀದಿ ಕಾಮಣ್ಣರ ಕಿರುಕುಳವನ್ನು ಬಹಿರಂಗವಾಗಿ ಹೇಳಲಾಗದೆ ಕೆಲ ಯುವತಿಯರು ತೀವ್ರ ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ಸಿಟಿ ಬಸ್‌ಗಳಲ್ಲಿ ಕೆಲ ವಿಕೃತ ವ್ಯಕ್ತಿಗಳು ಮಹಿಳಾ ಪ್ರಯಾಣಿಕರ ಮೈಕೈ ಮುಟ್ಟುವಂತಹ ಮೃಗೀಯ ವರ್ತನೆ ನಡೆಸುತ್ತಾರೆ.
ಇದನ್ನು ಯಾರ ಬಳಿಯೂ ಹೇಳಲಾಗದಂತಹ ಸ್ಥಿತಿ ನಮ್ಮದ್ದಾಗಿದೆ. ಈ ಹಿಂದೆ ಮಹಿಳಾ ಪೊಲೀಸರು ಸಿಟಿ ಬಸ್‌ಗಳಲ್ಲಿ, ಜನನಿಬಿಡ ಸ್ಥಳಗಳಲ್ಲಿ ಯಾರಿಗೂ ಗೊತ್ತಾಗದ ಹಾಗೆ ಬೀಡುಬಿಟ್ಟು ಇಂತಹ ಬೀದಿ ಕಾಮಣ್ಣರನ್ನು ಹಿಡಿದು ಕೊಂಡೊಯ್ಯುತ್ತಿದ್ದರು. ಇದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಇಂತಹ ಕೀಟಲೆಗೆ ಕಡಿವಾಣ ಬಿದ್ದಿತ್ತು. ಇದೀಗ ಪೊಲೀಸರು ಇಂತಹವರನ್ನು ಹಿಡಿದು ಕೊಂಡೊಯ್ಯುತ್ತಿಲ್ಲ. ಮತ್ತೆ ಬೀದಿ ಕಾಮಣ್ಣರು ಹಿಂದಿನ ಕಿಡಿಗೇಡಿ ಕೃತ್ಯಗಳನ್ನು ಪುನಾರಾಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಎಚ್ಚೆತ್ತುಕೊಳ್ಳಬೇಕಾಗಿದೆ.
ಇಂತಹ ಪುಂಡರಿಗೆ ತಕ್ಕ ಶಾಸ್ತಿ ಮಾಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಗೃಹಿಣಿ ನಾಗರತ್ನಾ ಎಂಬವರು ಆಗ್ರಹಿಸುತ್ತಾರೆ. ಸಕ್ರಿಯಗೊಳಿಸಿ: ಈ ಹಿಂದೆ ನಗರದಲ್ಲಿ ಕಾರ್ಯಾರಂಭಿಸಿದ್ದ ಓಬವ್ವ ಪಡೆಯನ್ನು ಮತ್ತೆ ಸಕ್ರಿಯಗೊಳಿಸಬೇಕಾಗಿದೆ. ಈ ಪಡೆಗೆ ಪ್ರತ್ಯೇಕ ಸಿಬ್ಬಂದಿ, ವಾಹನದ ವ್ಯವಸ್ಥೆ ಮಾಡಬೇಕು. ವರ್ಷದ ಎಲ್ಲ ದಿನಗಳಂದು ಈ ಪಡೆ ಕಾರ್ಯನಿರ್ವಹಣೆ ಮಾಡುವಂತಹ ವ್ಯವಸ್ಥೆ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಎಸ್ಪಿಯವರು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಈ ಪಡೆಯಿಂದ ಯುವತಿಯರು, ವಿದ್ಯಾರ್ಥಿನಿಯರು, ಮಹಿಳೆಯರು ನಗರದ ರಸ್ತೆಗಳಲ್ಲಿ ನೆಮ್ಮದಿಯಿಂದ ಓಡಾಡುವಂತಾಗುತ್ತದೆ ಎಂದು ಕೆಲ ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗಮನಹರಿಸುವುದೇ ಪೊಲೀಸ್ ಇಲಾಖೆ?
ಯುವ ಐಪಿಎಸ್. ಅಧಿಕಾರಿ ಅಭಿನವ್ ಖರೆಯವರು ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಜಾಯಮಾನದವರಾಗಿದ್ದು, ಸದ್ದುಗದ್ದಲವಿಲ್ಲದೆ ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ರೌಡಿಗಳು ಸೇರಿದಂತೆ ಕ್ರಿಮಿನಲ್ಸ್‌ಗಳ ಸದ್ದಡಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅಪರಾಧ ಚಟುವಟಿಕೆಗಳು ತಗ್ಗು ವಂತೆ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ, ಶಿವಮೊಗ್ಗ ನಗರದಲ್ಲಿ ಬೀದಿ ಕಾಮಣ್ಣರ ಪತ್ತೆಗೆ, ಮಹಿಳೆಯರ ಸುರಕ್ಷತೆಗೆ ಜಾರಿಗೊಳಿಸಲಾಗಿದ್ದ ಓಬವ್ವ ಪಡೆಯು ಇತ್ತೀಚೆಗೆ ಕ್ರಿಯಾಶೀಲವಾಗಿಲ್ಲದಿರುವುದೇಕೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕಾಗಿದೆ. ಈ ಪಡೆಯನ್ನು ಮತ್ತೆ ಸಕ್ರಿಯಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಹಾಗೆಯೇ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಇದೇ ಮಾದರಿಯ ಪಡೆ ರಚನೆ ಮಾಡುವ ಮೂಲಕ ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.







