ಅಕ್ರಮ ಶ್ರೀಗಂಧ ಶೇಖರಣೆ: ಆರೋಪಿಗೆ ಶಿಕ್ಷೆ
ಚಿಕ್ಕಮಗಳೂರು, ಜ.6: ಅಕ್ರಮವಾಗಿ ವಾಸದ ಮನೆಯಲ್ಲಿ ಶ್ರೀಗಂಧದ ತುಂಡುಗಳನ್ನು ಶೇಖರಿಸಿಟ್ಟಿದ್ದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
2016 ರ ಅ.25 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಗಾಳಿಪೇಟೆಯಲ್ಲಿರುವ ಆರೋಪಿ ತಸ್ಲೀಂ ಅಹ್ಮದ್ ತನ್ನ ವಾಸದ ಮನೆಯಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಶೇಖರಿಸಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿಯಂತೆ ಗ್ರಾಮಾಂತರ ಠಾಣಾ ಪೊಲೀಸರು ಮನೆಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.
ಆಗ ಆರೋಪಿ ತನ್ನ ಮನೆಯ ಮುಂಭಾಗದ ರೂಮಿನ ಮಂಚದ ಕೆಳಗಡೆ ಯಾವುದೇ ಪರವಾನಗಿ ಇಲ್ಲದೆ ರೂ. 40 ಸಾವಿರ ವೌಲ್ಯದ 16 ಕೆ.ಜಿ ಶ್ರೀಗಂಧದ ತುಂಡು ಮತ್ತು ಚೆಕ್ಕೆಗಳನ್ನು ತುಂಬಿಟ್ಟಿದ್ದನ್ನು ಪತ್ತೆ ಹಚ್ಚಿ ಸದರಿ ಅಕ್ರಮ ಶ್ರೀಗಂಧದ ತುಂಡುಗಳನ್ನು ಅಮಾನತ್ತುಪಡಿಸಿಕೊಂಡ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಠಾಣಾ ಪೊಲೀಸರು ಕರ್ನಾಟಕ ಅರಣ್ಯ ಕಾಯ್ದೆ ಕಲಂ 86 ಮತ್ತು 87 ರ ಅಪರಾಧಕ್ಕೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ಆರೋಪಿ ತಸ್ಲೀಂ ಅಹ್ಮದ್‌ಗೆ ಕರ್ನಾಟಕ ಅರಣ್ಯ ಕಾಯ್ದೆ ಕಲಂ 86 ಮತ್ತು 87ರ ಅಪರಾಧಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ.ಕೆ ಕುಲಕರ್ಣಿ ಮೊಕದ್ದಮೆಯನ್ನು ನಡೆಸಿದ್ದರು.







