ಶಿವಮೊಗ್ಗ ಮನಪಾ ಮೇಯರ್ ಸ್ಥಾನಕ್ಕೆ ಪೈಪೋಟಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನಿಂದ ಶುರುವಾಗಿದೆ ಕಾರ್ಯತಂತ್ರ

ಬಿ. ರೇಣುಕೇಶ್
ಶಿವಮೊಗ್ಗ, ಜ.6: ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕನೆ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಈಗಾಗಲೇ ರಾಜ್ಯ ಸರಕಾರ ಮೀಸಲಾತಿ ಪ್ರಕಟಿಸಿದೆ. ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಹಾಗೂ ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿರಿಸಿದೆ.
ಹಾಲಿ ಮೇಯರ್ - ಉಪ ಮೇಯರ್ ಅಧಿಕಾರಾವಧಿ ಫೆ. 4ಕ್ಕೆ ಅಂತ್ಯಗೊಳ್ಳಲಿದ್ದು, ಈ ತಿಂಗಳಾಂತ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಮೀಸಲಾತಿ ಕಾರಣದಿಂದ ಕಳೆದ ಬಾರಿ ಉಪಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮಂಗಳಾ ಅಣ್ಣಪ್ಪ ಹೊರತುಪಡಿಸಿ, ಇತರ ಪಕ್ಷಗಳಲ್ಲಿ ಆ ವರ್ಗಕ್ಕೆ ಸೇರಿದ ಸದಸ್ಯರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳಾ ಅಣ್ಣಪ್ಪಅವರೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಕೂಡ ಮೀಸಲಾತಿ ಕಾರಣ ದಿಂದಲೇ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ.
ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಉಪ ಮೇಯರ್ ಸ್ಥಾನ ನಿಗದಿಯಾಗಿದ್ದು, ಬಿಜೆಪಿಯಲ್ಲಿ ಮಾತ್ರ ಈ ವರ್ಗಕ್ಕೆ ಸೇರಿದ ಸದಸ್ಯೆಯಿದ್ದಾರೆ. ಆ ಪಕ್ಷದ ರೂಪಾ ಲಕ್ಷ್ಮಣ್‌ರವರು ಉಪ ಮೇಯರ್ ಆಗುವುದು ನಿಶ್ಚಿತವಾಗಿದೆ. ಈ ಹಿಂದಿನಂತೆ ಈ ಬಾರಿಯು ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರ ತನ್ನದಾಗಿಸಿಕೊಳ್ಳಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಡುವುದು ನಿಶ್ಚಿತವಾಗಿದೆ.
ಈಗಾಗಲೇ ಈ ನಿಟ್ಟಿನಲ್ಲಿ ಮೂರೂ ಪಕ್ಷಗಳು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸಲಾರಂಭಿಸಿವೆ. ಶತಾಯಗತಾಯ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಪ್ರಯತ್ನ ಪ್ರಾರಂಭಿಸಿವೆ. ಮೇಯರ್ ಸ್ಥಾನಕ್ಕೆ ಮೀಸಲಿರಿಸಿರುವ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಸದಸ್ಯರು ಮೂರು ಪಕ್ಷಗಳಲ್ಲಿಯೂ ತಲಾ ಓರ್ವರಿರುವುದು ವಿಶೇಷವಾಗಿದೆ. ಕಾಂಗ್ರೆಸ್‌ನಲ್ಲಿ ಲಕ್ಷ್ಮಣ್, ಬಿಜೆಪಿಯಲ್ಲಿ ವೆಂಕ್ಯಾನಾಯ್ಕಾ ಹಾಗೂ ಜೆಡಿಎಸ್‌ನಲ್ಲಿ ಕೇಬಲ್ ಬಾಬುರವರಿದ್ದಾರೆ.
ಈ ಮೂವರಲ್ಲಿ ಓರ್ವರು ಮೇಯರ್ ಗದ್ದುಗೆ ಅಲಂಕರಿಸುವುದು ಖಚಿತವಾಗಿದ್ದು, ಯಾರಿಗೆ ಅಧಿಕಾರ ಭಾಗ್ಯ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಬಾರಿ ಮೀಸಲಾತಿ ಕಾರಣದಿಂದ ಉಪ ಮೇಯರ್ ಸ್ಥಾನಕ್ಕೆ ಪಕ್ಷದ ಸದಸ್ಯೆ ಅವಿರೋಧವಾಗಿ ಆಯ್ಕೆಯಾ ಗುವುದು ನಿಶ್ಚಿತವಾಗಿದೆ. ಉಳಿದಂತೆ ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಪಡೆದುಕೊಳ್ಳಲು ಬಿಜೆಪಿ ಈ ಬಾರಿ ಕೂಡ ಪ್ರಯತ್ನ ನಡೆಸಲಿದೆ.
ವೆಂಕ್ಯಾನಾಯ್ಕಾ, ಮೇಯರ್ ಸ್ಥಾನದ ಸ್ಪರ್ಧಾಕಾಂಕ್ಷಿ
ಪ್ರಸ್ತುತ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂಬುದನ್ನು ಇಲ್ಲಿಯವರೆಗೂ ನಿರ್ಧಾರ ಮಾಡಿಲ್ಲ. ಚುನಾವಣಾ ದಿನಾಂಕ ನಿಗದಿಯಾದ ನಂತರ ಈ ಬಗ್ಗೆ ಇತರ ಸಮಾನ ಮನಸ್ಕ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೆಲ ಪಕ್ಷಗಳ ಮುಖಂಡರು ತಮಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದಾರೆ. ಐಡಿಯಲ್ ಗೋಪಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಳ್ವಿಕೆ ಮುಂದುವರಿಯಬೇಕಾದರೆ ಕಾಂಗ್ರೆಸ್‌ನವರು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಈ ಬಾರಿ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಡಬೇಕು. ಮೂರು ಬಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನಕ್ಕೆ ತಮ್ಮ ಪಕ್ಷ ಬೆಂಬಲ ವ್ಯಕ್ತಪಡಿಸಿದೆ.
ಈ ಬಾರಿ ಜೆಡಿಎಸ್‌ಗೆ ಅವಕಾಶ ಸಿಗುವ ವಿಶ್ವಾಸ ತಮ್ಮದಾಗಿದೆ. ಮೇಯರ್ ಗದ್ದುಗೆಗೆ ಜೆಡಿಎಸ್ ಪ್ರಬಲ ಆಕಾಂಕ್ಷಿಯಾಗಿದೆ. ನಮಗೆ ಬೆಂಬಲ ವ್ಯಕ್ತಪಡಿಸುವವರ ಪರವಾಗಿ ನಿಲ್ಲುತ್ತೇವೆ. ನಾಗರಾಜ್ ಕಂಕಾರಿ, ಯೋಜನಾ ಸ್ಥಾಯಿ ಸಮಿತಿ ಸದಸ್ಯ
’’







