ವಿದೇಶಿಯರ ಕ್ಯಾಮರಾ ಕಳವು ಪ್ರಕರಣ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರ ಪ್ರಶಂಸೆ
ಸಾಗರ, ಜ.6: ತಾಲೂಕಿನ ಕಾರ್ಗಲ್‌ನಲ್ಲಿ ವಿದೇಶಿಯರು ಕಳೆದುಕೊಂಡಿದ್ದ ಬೆಲೆ ಬಾಳುವ ಕ್ಯಾಮರಾವನ್ನು ಪೊಲೀಸರು ಪತ್ತೆಹಚ್ಚಿ ಸಂಬಂಧಪಟ್ಟವರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ. ಜಾಗತಿಕ ತಾಪಮಾನ ಕುರಿತು ವಿಶ್ವದಾದ್ಯಂತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊರಟಿದ್ದ ನೆದರ್‌ಲ್ಯಾಂಡ್‌ನ ಮೂವರು ಸಾಹಸಿ ಯಾತ್ರಿಗಳು ಬುಧವಾರ ಕೇರಳದ ಕೊಚ್ಚಿಯಿಂದ ಕಾರ್ಗಲ್‌ಗೆ ತಲುಪಿದ್ದರು. ಆ ವೇಳೆ ಅವರು ಪ್ರಯಣಿಸುತ್ತಿದ್ದ ರಿಕ್ಷಾ ಕೆಟ್ಟುಹೋದ ಕಾರಣ ಸಮೀಪದಲ್ಲಿದ್ದ ಗ್ಯಾರೇಜ್ ಒಂದರಲ್ಲಿ ಆಟೊವನ್ನು ರಿಪೇರಿಗೆ ಬಿಟ್ಟಿದ್ದರು. ಬಳಿಕ ಆಟೊ ರಿಪೇರಿ ಮುಗಿಸಿ ಹೊರಡುವ ಸಂದರ್ಭದಲ್ಲಿ ಸುಮಾರು 2 ಲಕ್ಷ ರೂ. ಬೆಲೆಬಾಳುವ ಕ್ಯಾಮರಾ ಕಳ್ಳತನವಾಗಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಯಾಮರಾ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕ್ಯಾಮರಾವನ್ನು ಪ್ರವಾಸಿಗರಿಗೆ ಹಿಂದಿರುಗಿಸಿದ್ದಾರೆ. ಪೊಲೀಸರ ಕಾರ್ಯವೈಖರಿಯನ್ನು ಸ್ಥಳೀಯರು ಹಾಗೂ ವಿದೇಶಿ ಪ್ರವಾಸಿಗರು ಪ್ರಶಂಸಿಸಿದ್ದಾರೆ.





