ಐಟಿ ಕಂಪೆನಿಗಳ ಶೇರು ಬೆಲೆಯಲ್ಲಿ ಭಾರೀ ಕುಸಿತ
ಎಚ್-1 ಬಿ ವಿಸಾ ನಿಯಮ ಬದಲಾವಣೆಗೆ ಮಸೂದೆ ಮಂಡನೆ
ಹೊಸದಿಲ್ಲಿ, ಜ.6: ಭಾರತ ಮತ್ತಿತರ ದೇಶಗಳ ಕುಶಲ ಕೆಲಸಗಾರರನ್ನು ಅಮೆರಿಕದಲ್ಲಿ ಉನ್ನತ ತಂತ್ರಜ್ಞಾನದ ಕಾರ್ಯಗಳಲ್ಲಿ ನೇಮಿಸಲು ಅನುಕೂಲವಾಗುವ ಎಚ್-1ಬಿ ವಿಸಾ ನಿಯಮದಲ್ಲಿ ಬದಲಾವಣೆ ಮಾಡಿಕೊಡುವ ಮಸೂದೆಯೊಂದನ್ನು ಅಮೆರಿಕದ ಸಂಸತ್ತಿನಲ್ಲಿ ಮರು ಮಂಡನೆ ಮಾಡಿರುವ ಬೆನ್ನಲ್ಲೇ ಐಟಿ (ಮಾಹಿತಿ ತಂತ್ರಜ್ಞಾನ) ಸಂಸ್ಥೆಗಳ ಶೇರು ಬೆಲೆಯಲ್ಲಿ ಸುಮಾರು ಶೇ.4ರಷ್ಟು ಕುಸಿತ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಇನ್ಫೋಸಿಸ್‌ನ ಶೇರು ಬೆಲೆಯಲ್ಲಿ ಶೇ.2.5ರಷ್ಟು ಕುಸಿತ ದಾಖಲಾದರೆ, ಟಿಸಿಎಸ್ ಕಂಪೆನಿಯ ಶೇರು ಬೆಲೆ ಶೇ.2.18ರಷ್ಟು, ವಿಪ್ರೋ ಶೇರು ಬೆಲೆ ಶೇ.2.18ರಷ್ಟು ಕುಸಿಯಿತು. ಇದರೊಂದಿಗೆ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 119.01 ಅಂಕ ಕುಸಿತ ಕಂಡು 26,759.23ಕ್ಕೆ ತಲುಪಿತು. ಉಳಿದಂತೆ ಟೆಕ್ ಮಹೀಂದ್ರಾ ಶೇರು ಬೆಲೆಯಲ್ಲಿ ಶೇ.3.80, ಹೆಕ್ಸಾವೇರ್ ಟೆಕ್ನಾಲಜೀಸ್ ಶೇ.3.73, ಎಚ್‌ಸಿಎಲ್ ಟೆಕ್ ಶೇ.3.55, ಎಂಫಾಸಿಸ್ ಶೇರು ಬೆಲೆಯಲ್ಲಿ ಶೇ.2.20 ಕುಸಿತ ದಾಖಲಾಗಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಎಚ್‌ಸಿಎಲ್ ಟೆಕ್- ಈ ಪ್ರಮುಖ ನಾಲ್ಕು ಕಂಪೆನಿಗಳಿಗೆ ಮಾರುಕಟ್ಟೆ ವೌಲ್ಯಮಾಪನದಲ್ಲಿ ಒಟ್ಟು 22 ಸಾವಿರ ಕೋಟಿ ರೂ. ನಷ್ಟವಾಗಿದೆ. ಏರುಗತಿಯಲ್ಲಿ ಸಾಗುತ್ತಿದ್ದ ಸ್ಟಾಕ್ ಮಾರುಕಟ್ಟೆಯು, ಮೂರನೇ ತ್ರೈಮಾಸಿಕ ಅವಧಿಯ ವರದಿಯ ನಿರೀಕ್ಷೆಯಿಂದ ಮತ್ತು ಎಚ್-1ಬಿ ವಿಸಾ ಮಸೂದೆಯಲ್ಲಿ ಪ್ರಮುಖ ಬದಲಾವಣೆಯ ಕಾರಣದಿಂದ ಕುಸಿತ ದಾಖಲಿಸಿದೆ ಎಂದು ಜಿಯೊಜಿತ್ ಬಿಎನ್‌ಪಿ ಪರಿಬಾಸ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯ ಪ್ರಧಾನ ಮಾರುಕಟ್ಟೆ ತಂತ್ರಜ್ಞ ಆನಂದ್ ಜೇಮ್ಸ್ ಅಭಿಪ್ರಾಯಪಟ್ಟಿದ್ದಾರೆ. ಎಚ್-1 ಬಿ ವಿಸಾ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡುವ ಮಸೂದೆಯನ್ನು ಬೆಂಬಲಿಸುವ ನಿರ್ಣಯವನ್ನು ವಕೀಲರಾದ ಡ್ಯಾರೆಲ್ ಇಸ್ಸಾ ಮತ್ತು ಸ್ಕಾಟ್ ಪೀಟರ್ಸ್ ಅಮೆರಿಕ ಸಂಸತ್ತಿನಲ್ಲಿ ಮರು ಮಂಡಿಸಿದ್ದರು. ಇದರಂತೆ ಸ್ನಾತಕೋತ್ತರ ಪದವಿ ಕಡ್ಡಾಯ ಎಂಬ ಷರತ್ತಿನಲ್ಲಿ ವಿನಾಯಿತಿ ಮತ್ತು ಎಚ್-1ಬಿ ವಿಸಾದಡಿ ಕನಿಷ್ಠ ಸಂಬಳವನ್ನು ವರ್ಷಕ್ಕೆ 1 ಲಕ್ಷ ಡಾಲರ್‌ಗೆ ಹೆಚ್ಚಿ ಸಲು ಮಸೂದೆಯಲ್ಲಿ ಅವಕಾಶವಿದೆ. ಡಿಸ್ನಿ, ಸೊಕಾಲ್ ಎಡಿಸನ್ ಸೇರಿದಂತೆ ಪ್ರಮುಖ ಕಂಪೆನಿಗಳು ಅಮೆರಿಕದ ಕೆಲಸಗಾರರ ಬದಲು ವಿದೇಶದ ಕೆಲಸಗಾರರಿಗೆ ಅವಕಾಶ ಮಾಡಿಕೊಟ್ಟ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎಚ್-1 ಬಿ ಮಸೂದೆಯಲ್ಲಿ ಬದಲಾವಣೆ ತರುವ ಮಸೂದೆಯನ್ನು ಮರು ಮಂಡಿಸಲಾಗಿದೆ.





