10,000 ವರ್ಷಗಳಲ್ಲಿ ಅತ್ಯಂತ ಕೆಟ್ಟ ಆಡಳಿತ
ಕೇಂದ್ರ ವಿರುದ್ಧ ದಾಳಿಯನ್ನು ತೀವ್ರಗೊಳಿಸಿದ ಶಿವಸೇನೆ
ಮುಂಬೈ,ಜ.6: ನೋಟು ರದ್ದತಿ ಕುರಿತಂತೆ ಎನ್‌ಡಿಎ ಸರಕಾರದ ವಿರುದ್ಧ ತನ್ನ ದಾಳಿಯನ್ನು ಶುಕ್ರವಾರ ಇನ್ನಷ್ಟು ತೀವ್ರಗೊಳಿಸಿದ ಮಿತ್ರಪಕ್ಷ ಶಿವಸೇನೆಯು ಅದನ್ನು ‘‘10,000 ವರ್ಷಗಳಲ್ಲಿ ಅತ್ಯಂತ ಕೆಟ್ಟ ಆಡಳಿತ’’ ಎಂದು ಬಣ್ಣಿಸಿದೆಯಲ್ಲದೆ, ಮಹಿಳೆಯರನ್ನೂ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ ಬಳಿಕವೂ ಬಿಜೆಪಿ ನಾಯಕರು ನೋಟು ರದ್ದತಿಯು ಕಪ್ಪುಹಣವನ್ನು ನಿರ್ಮೂಲಿಸುತ್ತದೆ ಎಂದು ಭಾವಿಸಿ ಮೂರ್ಖರ ಸ್ವರ್ಗದಲ್ಲಿ ವಿಹರಿಸುತ್ತಿದ್ದಾರೆ ಎಂದು ಹೇಳಿದೆ.
ಕೆಲವು ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳಲು ವಿಫಲಗೊಂಡ ಬಳಿಕ ಎಳೆಯ ಮಗುವನ್ನು ಮಡಿಲಲ್ಲಿ ಹೊತ್ತಿದ್ದ ಹತಾಶ ಮಹಿಳೆಯೋರ್ವಳು ದಿಲ್ಲಿಯ ಆರ್‌ಬಿಐ ಪ್ರಾದೇಶಿಕ ಕಚೇರಿಯೆದುರು ತನ್ನ ಮೇಲುಡುಪನ್ನು ಕಳಚಿ ಪ್ರತಿಭಟಿಸಿದ ವರದಿಯನ್ನು ಪ್ರಸ್ತಾಪಿಸಿರುವ ಶಿವಸೇನೆಯು, ಈ ಅಸಹಾಯಕ ತಾಯಿಯ ಬವಣೆ ‘‘ಸರಕಾರಿ ಪ್ರಾಯೋಜಿತ ನಿರ್ಭಯಾ ದುರಂತ’’ ದಂತೆ ಕಂಡುಬರುತ್ತಿದೆ ಎಂದು ಹೇಳಿದೆ.
ನೀವು ನೋಟು ರದ್ದತಿಯ ಪರವಾಗಿದ್ದೀರೋ ಅಥವಾ ಈ ಅಸಹಾಯಕ ಮಹಿಳೆಯ ಪರವೋ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಕೇಳಲು ನಾವು ಬಯಸಿದ್ದೇವೆ. ಸರಕಾರಕ್ಕೆ ಮಹಿಳೆಯ ಸಂಕಷ್ಟ ಕಾಣುತ್ತಿಲ್ಲ ಮತ್ತು ಅರ್ಥವಾಗುತ್ತಿಲ್ಲ ಎಂದಾದರೆ ಇಂತಹ ಕ್ರೂರ ಮತ್ತು ಕಿವುಡು ಆಡಳಿತ ಕಳೆದ 10,000 ವರ್ಷಗಳಲ್ಲಿ ಇರಲಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಇಂದಿನ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಿದೆ.
ಈ ಮಹಿಳೆ ತನ್ನಂತಹವರು ಅನುಭವಿಸುತ್ತಿರುವ ಬವಣೆಗಳನ್ನು ಮತ್ತು ಆಕ್ರೋಶವನ್ನು ಬೀದಿಗೆ ತಂದಿದ್ದಾಳೆ ಎಂದಿರುವ ಲೇಖನವು, ಈ ಮಹಿಳೆಯ ಕೃತ್ಯವು ರಾಷ್ಟ್ರವಾದವೆಂದು ನೀವು(ಬಿಜೆಪಿ) ಬಣ್ಣಿಸಿದರೆ ನಿಮ್ಮ ಮಿದುಳುಗಳಿಗೆ ಚಿಕಿತ್ಸೆ ನೀಡಲು ತಾಲಿಬಾನಿ ವೈದ್ಯರ ಅಗತ್ಯವಿದೆ. ಮಹಿಳೆಯರ ವಿರುದ್ಧ ಇಂತಹ ದೌರ್ಜನ್ಯಗಳು ತಾಲಿಬಾನಿ ಆಡಳಿತದಲ್ಲಿ ಮಾತ್ರ ನಡೆಯುತ್ತವೆ ಎಂದಿದೆ.





