ಮುನ್ರೊ ಮಿಂಚಿನ ಶತಕ, ನ್ಯೂಝಿಲೆಂಡ್‌ಗೆ ಸರಣಿ

ಬೇ ಓವಲ್(ನ್ಯೂಝಿಲೆಂಡ್), ಜ.6: ಕಾಲಿನ್ ಮುನ್ರೊ ಆಕ್ರಮಣಕಾರಿ ಶತಕದ(52 ಎಸೆತಗಳಲ್ಲಿ 100) ಸಹಾಯದಿಂದ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ 2ನೆ ಟ್ವೆಂಟಿ-20 ಪಂದ್ಯವನ್ನು 47 ರನ್‌ಗಳ ಅಂತರದಿಂದ ಜಯಿಸಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಿಂದ ಗೆದ್ದುಕೊಂಡಿದೆ.
ಶುಕ್ರವಾರ ಇಲ್ಲಿ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿಗೆ 196 ರನ್ ಗುರಿ ಪಡೆದಿದ್ದ ಪ್ರವಾಸಿ ಬಾಂಗ್ಲಾದೇಶ ತಂಡದ ಪರ ಶಬ್ಬೀರ್ರಹ್ಮಾನ್(48) ಹಾಗೂ ಸೌಮ್ಯ ಸರ್ಕಾರ್(39)3ನೆ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿ ಹೋರಾಟ ಸಂಘಟಿಸಿದ್ದರು. ಆದರೆ, ಉಳಿದ ಆಟಗಾರರಿಂದ ಇವರಿಗೆ ಬೆಂಬಲ ಸಿಗಲಿಲ್ಲ. ಬಾಂಗ್ಲಾ 18.1 ಓವರ್‌ಗಳಲ್ಲಿ 148 ರನ್‌ಗೆ ಆಲೌಟಾಯಿತು.
ಟಾಸ್ ಜಯಿಸಿ ಮೊದಲು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಇನಿಂಗ್ಸ್‌ನ ಮೊದಲ ಎಸೆತದಲ್ಲೆ ಕಿವೀಸ್ ಆರಂಭಿಕ ಆಟಗಾರ ಲೂಕ್ ರೊಂಚಿ ವಿಕೆಟ್ ಕಬಳಿಸಿತು. ಇನ್ನೋರ್ವ ಅಗ್ರ ಕ್ರಮಾಂಕದ ಆಟಗಾರ ಮುನ್ರೊ ತಾನೆದುರಿಸಿದ ಮೊದಲ 14 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿದರು.
ನಾಯಕ ಕೇನ್ ವಿಲಿಯಮ್ಸನ್(12) ಹಾಗೂ ಕೋರಿ ಆ್ಯಂಡರ್ಸನ್(04) ಬೇಗನೆ ಔಟಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃಢಚಿತ್ತದಿಂದ ಆಡಿದ ಮುನ್ರೊ ಇನಿಂಗ್ಸ್‌ನ 11ನೆ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು. ಮುಂದಿನ ಕೆಲವೇ ಎಸೆತಗಳಲ್ಲಿ 6,4,1,6,2,6,4,4,6 ರನ್ ಗಳಿಸಿದ ಮುನ್ರೊ ವೈಯಕ್ತಿಕ ಸ್ಕೋರನ್ನು 90ರ ಗಡಿ ತಲುಪಿಸಿದರು. ಮಹ್ಮೂದುಲ್ಲಾ ಓವರ್‌ನಲ್ಲಿ 28 ರನ್ ಗಳಿಸಿದರು.
ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಮುನ್ರೊ ನ್ಯೂಝಿಲೆಂಡ್‌ನ ಪರ 3ನೆ ಅತ್ಯಂತ ವೇಗದ ಶತಕ ಬಾರಿಸಿದರು. ಬ್ರೆಂಡನ್ ಮೆಕಲಮ್ ಕ್ರಮವಾಗಿ ಆಸ್ಟ್ರೇಲಿಯ ಹಾಗೂ ಬಾಂಗ್ಲಾದೇಶದ ವಿರುದ್ಧ ಕ್ರಮವಾಗಿ 50 ಹಾಗೂ 51 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
4ನೆ ವಿಕೆಟ್‌ಗೆ ಬ್ರೂಸ್(ಅಜೇಯ 59) ಅವರೊಂದಿಗೆ 123 ರನ್ ಜೊತೆಯಾಟ ನಡೆಸಿದ ಮುನ್ರೊ 101 ರನ್‌ಗೆ ಔಟಾದರು. ಮುನ್ರೊ 54 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಬಾರಿಸಿದ್ದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 195/7(ಮುನ್ರೊ 101, ಟಾಮ್ ಬ್ರೂಸ್ ಅಜೇಯ 59, ರುಬೆಲ್ ಹುಸೈನ್ 3-37)
ಬಾಂಗ್ಲಾದೇಶ: 18.1 ಓವರ್‌ಗಳಲ್ಲಿ 148 ರನ್‌ಗೆ ಆಲೌಟ್(ಶಬ್ಬೀರ್ರಹ್ಮಾನ್ 48, ಸೌಮ್ಯ ಸರ್ಕಾರ್ 39, ಐಶ್ ಸೋಧಿ 3-36, ವಿಲಿಯಮ್ಸನ್ 2-16)







