ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಲೋಕಸಭಾ ಸ್ಪೀಕರ್ ಹೇಳಿದ್ದೇನು ?

ಉಡುಪಿ, ಜ.6: ಹೊಸವರ್ಷದ ಸಂದರ್ಭದಲ್ಲಿ ಬೆಂಗಳೂರು ಹಾಗೂ ದಿಲ್ಲಿಯಲ್ಲಿ ದುಷ್ಕರ್ಮಿಗಳು ನಡೆಸಿದ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಕೆಲವು ನಗರಗಳಿಗೆ ಸೀಮಿತವಾದ ಘಟನೆಗಳಲ್ಲ. ಇದು ಇಡೀ ದೇಶದ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಮಹಿಳೆಯರ ಕುರಿತಂತೆ ನಮ್ಮ ಯುವಕರ ಮಾನಸಿಕತೆಯಲ್ಲಿ, ವರ್ತನೆಯಲ್ಲಿ ಬದಲಾವಣೆಯಾಗಬೇಕಿದೆ ಎಂದು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ಅಖಿಲ ಭಾರತ ಸಂಸ್ಕೃತ ಅಧಿವೇಶನದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ ಅವರು, ಶ್ರೀಕೃಷ್ಣ ಮಠವನ್ನು ಸಂದರ್ಶಿಸಿ, ಪೇಜಾವರ ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಇದು ಕೇವಲ ಪೊಲೀಸರು ಮಾತ್ರ ಕ್ರಮಕೈಗೊಳ್ಳುವ ವಿಷಯವಲ್ಲ. ಹೌದು, ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು. ಆದರೆ ಇದು ನಮ್ಮ ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆ. ನಾವು, ಪೋಷಕರು ನಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕಿದೆ. ಚಿಕ್ಕಂದಿನಲ್ಲೇ ನಾವು ಅವರಿಗೆ ಮಹಿಳೆಯರನ್ನು ಗೌರವಿಸುವ ಗುಣವನ್ನು ಬೆಳೆಸಬೇಕಾಗಿದೆ ಎಂದರು.
ಮಹಿಳೆಯರ ರಕ್ಷಣೆ ಕೇವಲ ಸರಕಾರ ಮತ್ತು ಪೋಲಿಸರ ಜವಾಬ್ದಾರಿಯಲ್ಲ. ಇದು ಇಡೀ ಸಮಾಜದ ಜವಾಬ್ದಾರಿಯೂ ಹೌದು. ಇದು ಕೇವಲ ಬೆಂಗಳೂರು ಮತ್ತು ದಿಲ್ಲಿಯ ಸಮಸ್ಯೆಯಲ್ಲ. ಇಡೀ ದೇಶಾದ್ಯಂತ ಇದು ಕಂಡುಬರುತ್ತಿದೆ. ಸಣ್ಣ ಹಳ್ಳಿಗಳಲ್ಲೂ ಇಂದು ಇಂಥ ಘಟನೆಗಳು ನಡೆಯುತ್ತಿವೆ. ಆದುದರಿಂದ ಇದೊಂದು ಸಾಮಾಜಿಕ ಪಿಡುಗು. ಇದನ್ನು ಎಲ್ಲರೂ ಸೇರಿ ಸರಿಪಡಿಸಬೇಕಿದೆ. ದೇಶದ ಪ್ರತಿಯೊಬ್ಬನ ಮೇಲೂ ಈ ಜವಾಬ್ದಾರಿ ಇದೆ ಎಂದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮಂಡನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಇದು ಸರಕಾರದ ಮಟ್ಟದಲ್ಲಿ ನಡೆಯಬೇಕಾಗಿದೆ ಎಂದರು.







