ನೀರು ಕಡಿತ : ಇರುವೈಲ್ ಪಂಚಾಯತ್‌ಗೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

ಮೂಡುಬಿದಿರೆ, ಜ.6 : ತೋಡಾರು ಕಂದೊಟ್ಟು ಪರಿಸರದ ದಲಿತ ಕಾಲೋನಿಯ 13 ಮನೆಗಳಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿರುವುದರನ್ನು ವಿರೋಧಿಸಿ ದ.ಕ ಜಿಲ್ಲೆ ದಲಿತ ಹಕ್ಕುಗಳ ಸಮಿತಿ ಹಾಗೂ ಸಿಪಿಐಎಂ ನೇತೃತ್ವದಲ್ಲಿ ಸಂತ್ರಸ್ತರು ಇರುವೈಲು ಗ್ರಾ.ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಈ ಹಿಂದೆ ಪಂಚಾಯತ್‌ನಿಂದ ದಲಿತ ಕಾಲೋನಿಗೆ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿತ್ತು. ಆದರೆ ಇದೀಗ ಕೆಲವು ಮನೆಯವರು ನೀರಿನ ಬಿಲ್ಲನ್ನು ಪಂಚಾಯತ್‌ಗೆ ಪಾವತಿಸದೆ ಇರುವುದರಿಂದ ಪಂಚಾಯತ್‌ನವರು ಕಡಿತಗೊಳಿಸಿದ್ದರು. ಈ ನಿಟ್ಟಿನಲ್ಲಿ ಸಂತ್ರಸ್ತರು ದಲಿತ ಹಕ್ಕುಗಳ ಸಮಿತಿಗೆ ದೂರನ್ನು ನೀಡಿದ ಹಿನ್ನಲೆಯಲ್ಲಿ ಗುರುವಾರದಂದು ಪಂಚಾಯತ್‌ನ ಎದುರುಗಡೆ ಪ್ರತಿಭಟನೆ ನಡೆಸಿ ಕಡಿತಗೊಳಿಸಿರುವ ನೀರಿನ ಸಂಪರ್ಕವನ್ನು ಮರು ಸಂಪರ್ಕಗೊಳಿಸುವಂತೆ ಮತ್ತು ಬಾಕಿ ಉಳಿದಿರುವ ನೀರಿನ ಬಿಲ್ಲನ್ನು ಎಸ್‌ಸಿ ಎಸ್‌ಟಿ ಅನುದಾನದಿಂದ ಭರಿಸುವಂತೆ ಆಗ್ರಹಿಸಿದ್ದರಲ್ಲದೆ ನೀರನ್ನು ನೀಡದಿದ್ದರೆ ಪಂಚಾಯತ್‌ಗೆ ಬೀಗ ಜಡಿಯುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಇದಕ್ಕೆ ಯಾವ ಅಧಿಕಾರಿಗಳು, ಜನಪ್ರತಿನಿಧಗಳು ಸ್ಪಂದಿಸದೆ ಇರುವುದರಿಂದ ಶುಕ್ರವಾರದಂದು ಮತ್ತೆ ಪ್ರತಿಭಟನೆ ನಡೆದಿದೆ.
ಪಂಚಾಯತ್‌ನವರು ಹಾಕಿರುವ ಬೀಗದ ಮೇಲೆ ಮತ್ತೊಂದು ಬೀಗವನ್ನು ಪ್ರತಿಭಟನಕಾರರು ಹಾಕಿದ್ದರು. 10 ಗಂಟೆಯ ವೇಳೆಗೆ ಪಂಚಾಯತ್‌ಗೆ ಆಗಮಿಸಿದ ಪಿಡಿಓ ಯಶವಂತ ಮತ್ತು ಅಧ್ಯಕ್ಷೆ ನವೀನ ಅವರು ಬೀಗ ಜಡಿದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ ಇದು ಕಾನೂನು ಬಾಹಿರ ಎಂದು ಹೇಳಿ ಬೀಗ ತೆಗೆಯಲು ಹೋದಾಗ ಸಮಿತಿಯವರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಸ್ಥಳಕ್ಕೆ ಭೇಟಿ ನೀಡಿ "ಬೀಗ ತೆಗೆಯಿರಿ ಕುಳಿತು ಮಾತಾಡೋಣ" ಎಂದು ಹೇಳಿದಾಗ ಪ್ರತಿಭಟನಕಾರರು ಬೀಗ ತೆಗೆದಿದ್ದಾರೆ.
ಪಂಚಾಯತ್‌ಗೆ ಅನುದಾನ ಬಂದಿಲ್ಲ. ಹಳೆ ಬಾಕಿ 1000 ನೀರಿನ ಬಿಲ್ಲನ್ನು ಪಾವತಿಸಿ ಎಂದು ಪಿಡಿಓ ತಿಳಿಸಿದರು. ಇದಕ್ಕೆ ಪ್ರತಿಭಟನಾಕಾರರು ಒಪ್ಪದಿದ್ದಾಗ ತಾತ್ಕಾಲಿಕವಾಗಿ ನೀರಿನ ಸಂಪರ್ಕವನ್ನು ನೀಡುವಂತೆ ತಹಶೀಲ್ದಾರ್ ಅವರು ಪಿಡಿಓ ಅವರಿಗೆ ಸೂಚಿಸಿದಾಗ ಪ್ರತಿಭಟನಾಕಾರರು ಒಪ್ಪಿ ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗಪ್ಪ ನಂತೂರು, ಸದಾಶಿವ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ದಲಿತ ಸಮಿತಿಯ ಮುಖಂಡರುಗಳಾದ ಯಮುನಾ ಕೊಂಚಾಡಿ, ತಿಮ್ಮಯ್ಯ, ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ವಾಲ್ಪಾಡಿ, ಕಾರ್ಯದರ್ಶಿ ಕೃಷ್ಣಪ್ಪ, ಸಂಚಾಲಕಿ ಗಿರಿಜಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







