ದಲಿತೆ ಎಂಬ ಕಾರಣಕ್ಕೆ ಕೆಲಸದಿಂದ ವಜಾ: ದೂರು
ಮಣಿಪಾಲ, ಜ.6: ದಲಿತೆ ಎಂಬ ಕಾರಣಕ್ಕೆ ಮಣಿಪಾಲ ರಜತಾದ್ರಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಹೊರಗುತ್ತಿಗೆ ಆಧಾರದ ಉದ್ಯೋಗಿಯೊಬ್ಬಳನ್ನು ಜಾತಿ ನಿಂದನೆ ಮಾಡಿ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಸಂತೆಕಟ್ಟೆ ಕೆಳಾರ್ಕಳಬೆಟ್ಟುವಿನ ಸತೀಶ್ ಕುಮಾರ್ ಎಂಬವರ ಪತ್ನಿ ಸವಿತಾ ಎಂಬವರು ಮಣಿಪಾಲ ಜಿಲ್ಲಾಧಿಕಾರಿ ಸಂಕೀರ್ಣ ರಜತಾದ್ರಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಸುಮಾರು ಎರಡೂವರೆ ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಕಚೇರಿಯ ಅಧಿಕಾರಿ ವಿದ್ಯಾ ಎಂಬವರು ಕೆಲವು ಸಮಯಗಳಿಂದ ಸವಿತಾರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದುಲ್ಲದೆ, ಜಾತಿಯ ಹೆಸರು ಹೇಳಿ, ನೀನು ಕೆಳಜಾತಿಯವಳು ಎಂದು ಯಾವಾಗಲೂ ಮೂದಲಿಸುತ್ತ ನೀನು ಈ ಕಚೇರಿಯಲ್ಲಿ ಕೆಲಸ ಮಾಡಲು ಅರ್ಹಳಲ್ಲ, ನಿನ್ನನ್ನು ಕೆಲಸದಿಂದ ತೆಗೆಯುತ್ತೇನೆಂದು ಕಾರಣವಿಲ್ಲದೆ ಯಾವಾಗಲೂ ಬೆದರಿಸುತ್ತಿದ್ದರು.
ಜ.2ರಂದು ಸವಿತಾ ಕೆಲಸಕ್ಕೆ ಕಚೇರಿಗೆ ಬಂದಾಗ ವಿದ್ಯಾರವರು ನೀನು ಕೆಲಸಕ್ಕೆ ಬರಬಾರದು, ನಿಮ್ಮ ಜಾತಿಯವರು ಇಲ್ಲಿ ಕೆಲಸ ಮಾಡಬಾರದು ಎಂದು ಜಾತಿ ನಿಂದನೆ ಮಾಡಿ, ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.







