ಶಿಕ್ಷಣ ಅಭಿಯಾನಕ್ಕೆ ಮಿಶೆಲ್ ಒಬಾಮಾರಿಂದ ಅಯ್ಕೆಯಾದ ಭಾರತೀಯ- ಅಮೆರಿಕನ್ ಪ್ರತಿಭೆ
ಈ ಬಾಲೆಗಿನ್ನೂ 16 ವರ್ಷ. ಲಾಭರಹಿತ ಸಂಸ್ಥೆಯೊಂದರ ಸಿಇಒ ಮತ್ತು ನುರಿತ ಭರತನಾಟ್ಯ ಪಟುವೂ ಹೌದು. ಹೆಸರು ಶ್ವೇತಾ ಪ್ರಭಾಕರನ್. ಭಾರತೀಯ ಅಮೆರಿಕನ್ ಆಗಿರುವ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರ ಪತ್ನಿ ಮಿಶೆಲ್ ಒಬಾಮಾ ಅವರು ರಾಷ್ಟ್ರದಲ್ಲಿಯ ಹದಿಹರೆಯದವರಿಗೆ ಶಿಕ್ಷಣಾವಕಾಶಗಳನ್ನು ಒದಗಿಸುವ ಶಿಕ್ಷಣ್ಣ ಅಭಿಯಾನವೊಂದರ ವಿದ್ಯಾರ್ಥಿ ಸಲಹಾ ಮಂಡಳಿಗೆ ಆಯ್ಕೆ ಮಾಡಿದ್ದಾರೆ.
1998ರಲ್ಲಿ ತಮಿಳುನಾಡಿನ ತಿರುನೆಲ್ವೆಲಿಯಿಂದ ಅಮೆರಿಕಾಕ್ಕೆ ವಲಸೆ ಬಂದಿರುವ ದಂಪತಿಯ ಪುತ್ರಿಯಾಗಿರುವ ಶ್ವೇತಾ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಯುವಜನರಿಗೆ ಶಿಕ್ಷಣ ನೀಡಲು ಮಾಡುತ್ತಿರುವ ಪ್ರಯತ್ನಗಳನ್ನು ಗುರುತಿಸಿ ಅವರನ್ನು ಬೆಟರ್ ಮೇಕ್ ರೂಮ್ ಅಭಿಯಾನದ ಪ್ರಪ್ರಥಮ ವಿದ್ಯಾರ್ಥಿ ಸಲಹಾ ಮಂಡಳಿಗೆ ಆಯ್ಕೆ ಮಾಡಲಾಗಿದೆ.
ಇಂಡಿಯಾನಾಪೊಲಿಸ್ ಸಂಜಾತೆ ಶ್ವೇತಾ ಸಲಹಾ ಮಂಡಳಿಗೆ ಶ್ವೇತಭವನವು ಆಯ್ಕೆ ಮಾಡಿರುವ 17 ವಿದ್ಯಾರ್ಥಿಗಳ ಪೈಕಿ ಏಕಮೇವ ಭಾರತೀಯ-ಅಮೆರಿಕನ್ ಆಗಿದ್ದಾರೆ. ಮಂಡಳಿಯು 12 ಪ್ರೌಢಶಾಲಾ ಮತ್ತು ಐವರು ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಿದೆ.
ವರ್ಜಿನಿಯಾದ ಥಾಮಸ್ ಜೆಫರ್ಸನ್ ಹೈಸ್ಕೂಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ವಿದ್ಯಾರ್ಥಿನಿಯಾಗಿರುವ ಶ್ವೇತಾ ‘ಎವರಿಬಡಿ ಕೋಡ್ ನೌ ’ಸಂಸ್ಥೆಯ ಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ. ಇದು ಮುಂದಿನ ಫೀಳಿಗೆಯ ಯುವಜನರು ಇಂಜಿನಿಯರ್‌ಗಳು,ವಿಜ್ಞಾನಿಗಳು ಮತ್ತು ಉದ್ಯಮಿಗಳಾಗುವಂತೆ ಅವರನ್ನು ಅರ್ಹರನ್ನಾಗಿಸಲು ದುಡಿಯುತ್ತಿರುವ ಲಾಭರಹಿತ ಸಂಸ್ಥೆಯಾಗಿದೆ.
ಮಂಡಳಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರಕಿರುವ ಗೌರವ ಎಂದು ಭಾವಿಸಿದ್ದೇನೆ. ಯುವಜನರಲ್ಲಿ ಕಾಲೇಜು ಶಿಕ್ಷಣವನ್ನು ಪಡೆಯುವ ಸಂಸ್ಕೃತಿಯನ್ನು ರೂಪಿಸುವ ನಿಟ್ಟಿನಲ್ಲಿ ಎವರಿಬಡಿ ಕೋಡ್ ನೌ ಕೆಲಸ ಮಾಡುತ್ತಿದೆ. ಈಗ ನಮ್ಮ ಈ ಗುರಿಯನ್ನು ಇನ್ನಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಶ್ವೇತಾ ಹೇಳಿದರು.







