ಉತ್ತರಪ್ರದೇಶದಲ್ಲಿ ದೇಶ ನಿರೀಕ್ಷಿಸುತ್ತಿರುವ ಉತ್ತರ

ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ. ನೋಟು ನಿಷೇಧದ ದುಷ್ಪರಿಣಾಮಗಳ ಕಳಂಕಗಳ ಅಗ್ನಿಕುಂಡದ್ಡಿಂದ ಪಾರಾಗಬೇಕಾದರೆ, ಈ ಚುನಾವಣೆಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿ ಮುಂದಿದೆ. ಈ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆಯೇ ನರೇಂದ್ರ ಮೋದಿ ನೇತೃತ್ವದ ಸರಕಾರದ ಭವಿಷ್ಯವಿದೆ. ದೇಶಾದ್ಯಂತ ನೋಟು ನಿಷೇಧ ತಳಸ್ತರದ ಜನರ ಬದುಕಿನ ಮೇಲೆ ಭಯೋತ್ಪಾದಕನಂತೆ ಎರಗಿದೆ. ಇದೊಂದು ರೀತಿಯಲ್ಲಿ ಅರ್ಥವ್ಯವಸ್ಥೆಯ ಮೇಲೆ ಬಿಜೆಪಿ ಸರಕಾರದ ಆತ್ಮಾಹುತಿ ದಾಳಿಯೇ ಸರಿ. ಕಪ್ಪು ಹಣವನ್ನು ಮಟ್ಟ ಹಾಕುತ್ತೇನೆ ಎಂದು ಘೋಷಿಸಿ ನೋಟು ನಿಷೇಧವನ್ನು ಮಾಡಲಾಯಿತಾದರೂ, ಕಪ್ಪು ಹಣ ಬ್ಯಾಂಕಿಗೆ ಸೇರಲಿಲ್ಲ. ವಿತ್ತ ಸಚಿವ ಅರುಣ್ ಜೇಟ್ಲಿಯನ್ನು ಈ ಬಗ್ಗೆ ಮಾಹಿತಿ ಕೇಳಿದರೆ ‘‘ನನಗೆ ಅದರ ಬಗ್ಗೆ ಗೊತ್ತಿಲ್ಲ’’ ಎಂದು ಬಹಿರಂಗವಾಗಿ ಹೇಳಿ, ಸರಕಾವನ್ನು ಮುಜುಗರಕ್ಕೀಡು ಮಾಡಿದ್ದಾರೆ.
ರಿಸರ್ವ್ ಬ್ಯಾಂಕ್ ಕೂಡ, ನೋಟು ನಿಷೇಧದ ಬಳಿಕ ಆದ ಲಾಭಗಳನ್ನು ಜನರ ಮುಂದಿಡಲು ವಿಫಲವಾಗಿದೆ. ಈ ವೈಫಲ್ಯವನ್ನು ಮುಚ್ಚಿ ಹಾಕಲು ‘ಕ್ಯಾಶ್‌ಲೆಸ್ ಇಕಾನಮಿ’ಯ ಕುರಿತಂತೆ ಮೋದಿ ಮಾತನಾಡುತ್ತಿದ್ದಾರೆ. ಹೊಸ ವರ್ಷಾರಂಭದಲ್ಲಿ ನರೇಂದ್ರ ಮೋದಿ, ಒಂದೆರಡು ಯೋಜನೆಗಳನ್ನು ಘೋಷಿಸಿ, ಜನರ ಬಾಯಿ ಮುಚ್ಚಿಸಲು ಯತ್ನಿಸಿದರು. ನೋಟಿನ ಮೇಲಿರುವ ನಿರ್ಬಂಧ ಯಾವಾಗ ಹಿಂದೆಗೆಯಲ್ಪಡುತ್ತದೆ, ಕಪ್ಪು ಹಣ ವಾಪಸು ಬಂತೆ, ಅದರಿಂದ ದೇಶಕ್ಕೆ ಲಾಭವೆಷ್ಟಾಯಿತು ಎನ್ನುವುದನ್ನು ವಿವರಿಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಕ್ಯಾಶ್‌ಲೆಸ್ ಇಕಾನಮಿಯನ್ನು ಅವಲಂಬಿಸಲು ಸರಕಾರ ಹೇಳುತ್ತಿದೆಯಾದರೂ, ಈ ದೇಶದ ಶೇ. 70ರಷ್ಟು ಜನರು ಆ ಮೂಲಕ ವ್ಯವಹಾರ ನಡೆಸಲು ವಿಫಲರಾಗಿದ್ದಾರೆ. ಗ್ರಾಮೀಣ ಪ್ರದೇಶದ ಅರ್ಥವ್ಯವಸ್ಥೆ ನೆಲಕಚ್ಚಿದೆ. ಸಣ್ಣಪುಟ್ಟ ಉದ್ದಿಮೆಗಳು ನಾಶವಾಗಿವೆ. ತಳಸ್ತರದ ಭಾರತದಲ್ಲಿ ‘ತುರ್ತುಪರಿಸ್ಥಿತಿ’ ವಾತಾವರಣವಿದೆ. ರೈತರು, ಕಾರ್ಮಿಕರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಮಾಧ್ಯಮಗಳನ್ನು ಕೊಂಡುಕೊಳ್ಳುವ ಮೂಲಕ ಇವೆಲ್ಲವನ್ನು ಮುಚ್ಚಿ ಹಾಕಲು ಸರಕಾರ ಮುಂದಾಗಿದೆ. ‘ದೇಶದಲ್ಲಿ ಅಚ್ಛೇದಿನ್ ನಿರ್ಮಾಣವಾಗುತ್ತಿದೆ’ ಎನ್ನುವ ಸುಳ್ಳು ಸುದ್ದಿಯನ್ನು ಹರಡಿ ಜನರನ್ನು ಕತ್ತಲಲ್ಲಿಡಬಹುದು ಎಂದು ಸರಕಾರ ಯೋಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ.
ಕನಿಷ್ಠ ಮೂರು ರಾಜ್ಯಗಳನ್ನಾದರೂ ಗೆಲ್ಲಲೇ ಬೇಕಾದಂತಹ ಅಗತ್ಯ ಬಿಜೆಪಿಗಿದೆ. ಹಾಗೇನಾದರೂ ಗೆದ್ದರೆ, ಬಿಜೆಪಿ ನೋಟು ನಿಷೇಧದ ಉರುಳಿನಿಂದ ತಾತ್ಕಾಲಿಕವಾಗಿ ಪಾರಾಗುತ್ತದೆ. ಉತ್ತರ ಪ್ರದೇಶವನ್ನು ಗೆಲ್ಲುವುದಂತೂ ಬಿಜೆಪಿಗೆ ಅನಿವಾರ್ಯವಾಗಿದೆ. ಈಗಾಗಲೇ ‘ಉತ್ತರಪ್ರದೇಶವನ್ನು ಗೆದ್ದಿದ್ದೇವೆ’ ಎನ್ನುವ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕ ಬಿತ್ತುವುದಕ್ಕೆ ಬಿಜೆಪಿ ಶುರು ಮಾಡಿದೆ. ಸಮಾವೇಶದಲ್ಲಿ ಭಾರೀ ಜನ ಸೇರಿಸಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಆಡಿಕೊಳ್ಳುವಂತೆ ಮಾಡುತ್ತಿದೆ. ಉತ್ತರಪ್ರದೇಶವನ್ನು ಗೆಲ್ಲುವುದೆಂದರೆ ನೋಟು ನಿಷೇಧದಿಂದ ದೇಶಕ್ಕೆ ಆಗಿರುವ ಹಾನಿಯಿಂದ ತಾತ್ಕಾಲಿಕವಾಗಿ ಬಚಾವಾಗುವುದೆಂದೇ ಅರ್ಥ. ಆದುದರಿಂದ ಈ ಚುನಾವಣೆಯನ್ನು ಗೆಲ್ಲುವುದಕ್ಕೆ ಬಿಜೆಪಿ ಸರ್ವರೀತಿಯಲ್ಲಿ ಪ್ರಯತ್ನಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯದ ಚುನಾವಣೆಯಲ್ಲಿ ಉತ್ತರಪ್ರದೇಶ ನೀಡುವ ಉತ್ತರ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಬಿಜೆಪಿಗೆ ಸಮಸ್ಪರ್ಧಿ ಯಾರು ಎನ್ನುವುದರ ಮೇಲೆಯೇ ಫಲಿತಾಂಶವನ್ನು ನಿರ್ಧರಿಸಬಹುದು. ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷ ತಂದೆ-ಮಗನ ಜಗಳದಲ್ಲಿ ತತ್ತರಿಸಿದೆ.
ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿಯ ನಡುವೆ ನಡೆದ ತಿಕ್ಕಾಟದ ಮರು ಪ್ರದರ್ಶನ ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಸಣ್ಣ ವ್ಯತ್ಯಾಸವೆಂದರೆ, ಅಂದು ರಾಜ್ಯದಲ್ಲಿ ಮಗನನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ತಂದೆ-ಮಗನ ನಡುವೆ ಜಗಳದ ನಾಟಕ ನಡೆಯಿತು. ಆದರೆ ಇಂದು ಉತ್ತರ ಪ್ರದೇಶದಲ್ಲಿ ಮಗನನ್ನು ಅಧಿಕಾರದಿಂದಿಳಿಸುವ ಮುಲಾಯಂ ಪ್ರಯತ್ನದಿಂದ ಪಕ್ಷ ಒಡೆಯುವ ಸ್ಥಿತಿಯಲ್ಲಿದೆ. ಮಗನನ್ನು ಅಧಿಕಾರದಿಂದಿಳಿಸುವ ಪ್ರಯತ್ನದಲ್ಲಿ ಮುಲಾಯಂ ಸಿಂಗ್ ಬಳಗ ಸಂಪೂರ್ಣ ವಿಫಲರಾಗಿದೆ ಮಾತ್ರವಲ್ಲ, ನಿಧಾನಕ್ಕೆ ಇಡೀ ಸಮಾಜವಾದಿ ಪಕ್ಷದ ಮೇಲೆ ಅಖಿಲೇಶ್ ಯಾದವ್ ನಿಯಂತ್ರಣವನ್ನು ಸಾಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಅಖಿಲೇಶ್ ಅಮಾಯಕರಂತೆ ಕಂಡರೂ, ಆಳದಲ್ಲಿ ಅವರೂ ರಾಜಕೀಯ ದಾಳಗಳನ್ನು ಈಗಾಗಲೇ ಪ್ರಯೋಗಿಸತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಉತ್ತರಪ್ರದೇಶದಲ್ಲಿ ಚುನಾವಣೆಯನ್ನು ಎದುರಿಸುವುದು ಅಖಿಲೇಶ್ ಗುರಿ. ಮುಲಾಯಂನ ಜೊತೆಗಿರುವ ಹಲವರು ಇದರ ವಿರುದ್ಧ ನಿಂತಿದ್ದಾರೆ. ಮುಲಾಯಂ ಅವರಿಗೆ ‘ಅತ್ತ ಧರಿ, ಇತ್ತ ಪುಲಿ’ ಎನ್ನುವಂತಹ ಸ್ಥಿತಿ.
ಸರಕಾರದಲ್ಲಿರುವ ಬಹುತೇಕ ಶಾಸಕರು ಅಖಿಲೇಶ್ ಜೊತೆ ಕೈ ಜೋಡಿಸಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಈ ಬಾರಿ ಬ್ರಾಹ್ಮಣರನ್ನು ಓಲೈಸುವ ಕುರಿತು ಸ್ಪರ್ಧೆ ನಡೆಯುತ್ತಿದೆ. ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳು ದಲಿತ, ಮುಸ್ಲಿಮ್, ಹಿಂದುಳಿದ ವರ್ಗಗಳ ಮತಗಳ ಮೇಲೆ ನಿಂತಿದೆ. ಹೀಗಿರುವಾಗ, ಮೇಲ್ವರ್ಣೀಯರ ಮತಗಳು ಗೆಲುವಿಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕಾಂಗ್ರೆಸ್ ಈ ಕಾರಣಕ್ಕಾಗಿಯೇ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲು ಮುಂದಾಗಿದೆ. ಬ್ರಾಹ್ಮಣ ಸಮುದಾಯದ ಮೇಲೆ ಶೀಲಾದೀಕ್ಷಿತ್‌ಗೆ ಅಲ್ಲಿ ಹಿಡಿತವಿದೆ. ಅಖಿಲೇಶ್ ಏಕಕಾಲದಲ್ಲಿ ಹಿಂದುಳಿದವರ್ಗ ಮತ್ತು ಬ್ರಾಹ್ಮಣರ ಮತಗಳನ್ನು ತನ್ನದಾಗಿಸಲು ಕಾಂಗ್ರೆಸ್‌ನ ಜೊತೆಗೆ ಮೈತ್ರಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಿಎಂ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಅಖಿಲೇಶ್ ಅವರನ್ನು ಪರೋಕ್ಷವಾಗಿ ಘೋಷಿಸಿದೆ.
ಮೇಲ್ನೋಟಕ್ಕೆ ಅಧಿಕಾರ ಹಿಡಿಯುವ ಎಲ್ಲ ಅವಕಾಶಗಳೂ ಮಾಯಾವತಿ ನೇತೃತ್ವದ ಬಿಎಸ್ಪಿಗೆ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಗೆಲುವು ಅಷ್ಟು ಸುಲಭವಂತೂ ಅಲ್ಲ. ಯಾಕೆಂದರೆ, ವಿರೋಧಪಕ್ಷವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಯಾವತಿ ನಿರ್ವಹಿಸಿದ ರೀತಿ ಪ್ರಶ್ನಾರ್ಹವಾಗಿದೆ. ದೇಶಾದ್ಯಂತ ದಲಿತರ ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಪರಿಣಾಮಕಾರಿಯಾಗಿ ಧ್ವನಿಯೆತ್ತಲು ಮಾಯಾವತಿ ಸಂಪೂರ್ಣವಾಗಿ ವಿಫಲರಾದರು. ದೇಶದ ವಿಷಯ ಪಕ್ಕಕ್ಕಿಡೋಣ. ಉತ್ತರ ಪ್ರದೇಶದಲ್ಲೇ ಮುಸ್ಲಿಮರ ಮೇಲೆ ನಡೆದ, ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮಾಯಾವತಿ ಅತ್ಯಂತ ಮೆದು ನಿಲುವುಗಳನ್ನು ತಳೆಯುತ್ತಾ ಬಂದಿದ್ದಾರೆ. ದಾದ್ರಿಯ ಪ್ರಕರಣವನ್ನೂ ಅವರು ಸಂಪೂರ್ಣ ಕೈ ಚೆಲ್ಲಿದರು. ರೋಹಿತ್ ವೇಮುಲಾ ಆತ್ಮಹತ್ಯೆ ದೇಶಾದ್ಯಂತ ದಲಿತರನ್ನು ಸಂಘಟಿಸಿತಾದರೂ, ಮಾಯಾವತಿ ಆ ಚಳವಳಿಯಿಂದ ಸಂಪೂರ್ಣ ದೂರ ನಿಂತರು. ಗೋಮಾಂಸದ ಹೆಸರಿನಲ್ಲಿ ದಲಿತರ ಮೇಲೆ ನಿರಂತರ ಹಲ್ಲೆ ನಡೆದಾಗಲೂ ಅದರ ವಿರುದ್ಧ ಹೋರಾಟವೊಂದನ್ನು ಸಂಘಟಿಸಲು ಬಿಎಸ್‌ಪಿಗೆ ಸಾಧ್ಯವಾಗಲಿಲ್ಲ.
ಇದೇ ಸಂದರ್ಭದಲ್ಲಿ ರೋಹಿತ್ ವೇಮುಲಾ ಪರವಾಗಿ ಧ್ವನಿಯೆತ್ತಿದ ಕನ್ಹಯ್ಯಿ ತಂಡವನ್ನು ರಾಜಕೀಯವಾಗಿ ಬಗ್ಗು ಬಡಿಯುವ ಉದ್ದೇಶದಿಂದ, ಹೋರಾಟವನ್ನೇ ನಿಂದಿಸಿದರು. ಉನಾದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ ಅಲ್ಲೂ ಬೃಹತ್ ಚಳವಳಿ ನಡೆಯಿತಾದರೂ ಅವೆಲ್ಲವನ್ನೂ ಎಡಪಕ್ಷಗಳು ಪರಿಣಾಮಕಾರಿಯಾಗಿ ಬಳಸಿಕೊಂಡವು. ದಲಿತರು ಮತ್ತು ಮುಸ್ಲಿಮರನ್ನು ಪುನರ್ ಸಂಘಟಿಸಿ ದೇಶಾದ್ಯಂತ ಚಳವಳಿಯನ್ನು ರೂಪಿಸುವ ಹಲವು ಅವಕಾಶವನ್ನು ಅವರು ಕಳೆದುಕೊಂಡರು. ಇದೀಗ ಚುನಾವಣೆ ಘೋಷಣೆಗೊಂಡಾಗ ಆಕೆ ಟಿಕೆಟನ್ನು ಬ್ರಾಹ್ಮಣರಿಗೆ, ಮುಸ್ಲಿಮರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಸ್ತರಿಸಿ ಗೆಲುವಿನ ಕಡೆಗೆ ತಂತ್ರ ರೂಪಿಸಿದ್ದಾರೆ. ಹಾಗೆಯೇ ‘ಚುನಾವಣೆಯಲ್ಲಿ ಮುಸ್ಲಿಮರು ಸಮಾಜವಾದಿ ಪಕ್ಷಕ್ಕೆ ಮತ ಹಾಕಿ ಮತಗಳನ್ನು ವಿಭಜಿಸಬಾರದು’ ಎಂದೂ ಕರೆ ನೀಡಿದ್ದಾರೆ. ಅಂದರೆ ಈವರೆಗೆ ಕಾಂಗ್ರೆಸ್ ಮಾಡುತ್ತಿದ್ದ ತಂತ್ರಕ್ಕೆ ಮಾಯಾವತಿ ಮೊರೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿಯ ಗುಮ್ಮ’ನನ್ನು ತೋರಿಸಿ ಮುಸ್ಲಿಮರನ್ನು ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ. ಅದರ ಬದಲು ಉತ್ತರ ಪ್ರದೇಶದ ಮುಸ್ಲಿಮರ ಸಂಕಟಗಳ ಜೊತೆಗೆ ಬಲವಾಗಿ ನಿಂತಿದ್ದರೆ, ಇಂದು ಮುಸ್ಲಿಮರನ್ನು ಬ್ಲಾಕ್‌ಮೇಲ್ ಮಾಡುವ ಅಗತ್ಯ ಮಾಯಾವತಿಗೆ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಎಸ್ಪಿ ಮೇಲೆ ಮುಸ್ಲಿಮರು ಭರವಸೆ ಕಳೆದುಕೊಂಡಿದ್ದಾರೆ ನಿಜ. ಆದರೆ ಅದು ಬಿಎಸ್ಪಿಗೆ ಎಷ್ಟರಮಟ್ಟಿಗೆ ವರವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಮುಸ್ಲಿಮರ ಜೊತೆಗೆ ಬ್ರಾಹ್ಮಣರು ಬಿಎಸ್ಪಿಗೆ ಒಲಿದರೆ ಉತ್ತರಪ್ರದೇಶದಲ್ಲಿ ಮತ್ತೆ ಮಾಯಾವತಿ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳಿವೆ. ಆದರೆ ಈ ತಿಕ್ಕಾಟದ ಪ್ರಯೋಜನವನ್ನು ಬಿಜೆಪಿಯೇನಾದರೂ ಪಡೆದರೆ, ದೇಶದ ಪಾಲಿಗೆ ಮುಂದಿನ ದಿನಗಳು ಇನ್ನಷ್ಟು ಭೀಕರವಾಗಲಿವೆ.







