ಪರಿಸರದ ಜೀವ ವೈವಿಧ್ಯ ಉಳಿಸಲು ಮುಂದಾಗಿ: ಸಚಿವ ರೈ
ಹೊಗೆ ಪರೀಕ್ಷಣಾ ಸಂಚಾರಿ ವಾಹನಕ್ಕೆ ಚಾಲನೆ

ಮಂಗಳೂರು, ಜ.6: ನಗರಗಳಲ್ಲಿ ಶೇ.40ರಷ್ಟು ಪರಿಸರ ಮಾಲಿನ್ಯವು ಧೂಳು ಮತ್ತು ಇತರ ಕಾರಣಗಳಿಂದ ಉಂಟಾದರೆ ಶೇ.60ರಷ್ಟು ಮಾಲಿನ್ಯವು ವಾಹನಗಳಿಂದ ಉಂಟಾಗುತ್ತಿದೆ. ನಾವು ಏನೂ ಬೇಕಾದರೂ ಖರೀದಿ ಮಾಡಬಹುದು. ಆದರೆ ಶುದ್ಧ ಗಾಳಿಯನ್ನು ಎಲ್ಲೂ ಖರೀದಿ ಮಾಡಲು ಸಾಧ್ಯವಿಲ್ಲ. ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಉಳಿಸಿ, ಬೆಳಸುವಲ್ಲಿ ಸಾರ್ವಜನಿಕರ ಸಹಕಾರ ಪ್ರಮುಖ್ಯವಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ನಗರದ ಪುರಭವನದಲ್ಲಿ ರಾಜ್ಯ ಮಾಲಿನ್ಯ ಮಂಡಳಿ, ಮನಪಾ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಎಂಆರ್‌ಪಿಎಲ್ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ‘ಹೊಗೆ ಪರೀಕ್ಷಣಾ ಸಂಚಾರಿ ವಾಹನ’ಕ್ಕೆ ಚಾಲನೆ ನೀಡಿದ ಅವರು ಮಾತನಾಡುತ್ತಿದ್ದರು.
ಪರಿಸರಕ್ಕೆ ಮಾರಕವಾಗಿರುವ ಹಳೆ ವಾಹನಗಳನ್ನು ತಡೆಗಟ್ಟಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಗ್ಯಾಸ್‌ಯುಕ್ತ ಹಾಗೂ ಇಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಮಂಗಳೂರು ನಗರವನ್ನು ಗ್ಯಾಸ್‌ಯುಕ್ತ ನಗರವನ್ನಾಗಿ ಮಾಡುವುದು ಅಗತ್ಯ ಎಂದರು.
ಶಾಸಕ ಬಿ.ಎ.ಮೊಯ್ದಿನ್ ಬಾವ, ಶಾಸಕ ಜೆ. ಆರ್. ಲೋಬೊ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್, ಪ್ರೋ. ಜಿ. ನಿಕೇತನ ಮಾತನಾಡಿದರು. ವೇದಿಕೆಯಲ್ಲಿ ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಕುಮಾರ್, ಶಿವಮೊಗ್ಗ ಜಂಟಿ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ, ಮಂಗಳೂರು ಉಪ ಸಾರಿಗೆ ಆಯುಕ್ತ ರಮೇಶ್ ವರ್ಣೇಕರ್ ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಸ್ವಾಗತಿಸಿದರು. ಮನಪಾ ಆಯುಕ್ತ ಮುಹಮ್ಮದ್ ನಝೀರ್ ವಂದಿಸಿದರು.
ಪರಿಸರ ಜಾಥಾ
ವಾಹನಗಳ ಹೊಗೆಯಿಂದ ಆಗುತ್ತಿರುವ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದ ಠಾಗೋರ್ ಪಾರ್ಕ್‌ನಿಂದ ಪುರಭವನದವರೆಗೆ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಥಾವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಹೊಗೆ ಪರೀಕ್ಷಣಾ ಸಂಚಾರಿ ವಾಹನದ ಕಾರ್ಯ ಹೇಗೆ?
ನಗರಕ್ಕೆ ನೀಡಲಾಗಿರುವ ಹೊಗೆ ಪರೀಕ್ಷಣಾ ಸಂಚಾರಿ ವಾಹನವು ಮಂಗಳೂರು ಮಾತ್ರವಲ್ಲದೆ ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ 4 ಜಿಲ್ಲೆಗಳಲ್ಲಿ ಕಾರ್ಯಾಚರಿಸಲಿದೆ. ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ತಪಾಸಣೆಗೆ ಇದರಲ್ಲಿರುವ ಪ್ರತ್ಯೇಕ ಎಮೀಷನ್ ಟೆಸ್ಟ್ ಮಿಷನ್ ವಾಹನಗಳ ಹೊಗೆ ಸೂಸುವಿಕೆಯ ಗುಣ್ಣಮಟ್ಟವನ್ನು ಕಂಡು ಹಿಡಿಯಲು ಸಹಕಾರಿಯಾಗಿದೆ.







