ಉಳ್ಳವರಿಗಷ್ಟೇ ಬೆಂಗಳೂರು ಸುರಕ್ಷಿತವೇ..!?
ಮಾನ್ಯರೆ,
ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತವಲ್ಲ ಎಂಬ ಬೊಬ್ಬೆ ಮತ್ತೆ ಕೇಳಿಬರುತ್ತಿದೆ. ಇಂತಹ ಬೊಬ್ಬೆ ಗ್ಯಾಂಗ್ ರೇಪ್, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಮಾತ್ರ ಕೇಳಿಬರುತ್ತಿದೆ. ಬೆಂಗಳೂರು ಶ್ರೀಮಂತರಿಗಷ್ಟೇ ಸುರಕ್ಷಿತವಾಗಿದೆ. ಹೇಗೆ ಮಹಿಳೆಯರಿಗೆ ರಕ್ಷಣೆ ಇಲ್ಲವೋ, ಅದೇ ರೀತಿ ಮಧ್ಯಮ ವರ್ಗದವರಿಗೆ, ಬಡವರಿಗೆ, ಸ್ಲಮ್ ನಿವಾಸಿಗಳಿಗೆ, ವೃದ್ಧ್ದರಿಗೂ ಇಲ್ಲಿ ಸುರಕ್ಷತೆ ಇಲ್ಲ. ಮಹಾನಗರಿಯ ಗಲ್ಲಿ-ಗಲ್ಲಿಗಳಲ್ಲಿ ಸುತ್ತಾಡಿದಾಗ ಹೆಣ್ಮಕ್ಕಳು ಭಯದಿಂದ ಬದುಕುತ್ತಿರುವ ಚಿತ್ರಣ ಕಾಣ ಸಿಗುತ್ತದೆ. ಆದರೂ ಪೊಲೀಸರು ಇಂತಹ ಚಿತ್ರಣವನ್ನು ಬದಲಿಸಲು, ನಿಯಂತ್ರಿಸಲು ಹಾಗೂ ಅಪರಾಧ ಎಸಗಿದವರಿಗೆ ಶಿಕ್ಷೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.
ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡಾ ರಾಜಧಾನಿಯಲ್ಲಿ ಲೈಂಗಿಕ ಕಿರುಕುಳಗೊಳಗಾಗುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ. ರಾತ್ರಿ ಹತ್ತು ಗಂಟೆ ಆದರೆ ಸಾಕು, ಗಲ್ಲಿಗಳಲ್ಲಿ, ರಸ್ತೆ ಬದಿಗಳಲ್ಲಿ ರೌಡಿಗಳ ದಂಡೇ ಇರುತ್ತದೆ. ಸಾಮಾನ್ಯ ಜನರನ್ನು ಬೆದರಿಸಿ ಹಣಕ್ಕಾಗಿ ಪೀಡಿಸುತ್ತಾರೆ. ಇದನ್ನು ನಿಯಂತ್ರಿಸಬೇಕಾದ ಪೊಲೀಸರೇ ‘ರೌಂಡ್ಸ್’ ನೆಪದಲ್ಲಿ ಬೀದಿ ಬದಿ ಇರುವ ಅಂಗಡಿ ಮಾಲಕರ ಬಳಿ ಹೋಗಿ ‘ಮಾಮೂಲಿ’ ಹಣಕ್ಕಾಗಿ ಬೆದರಿಸುತ್ತಾರೆ. ಒಂದು ವೇಳೆ ಕೊಡದಿದ್ದರೆ ಹಲ್ಲೆ ಮಾಡುತ್ತಾರೆ. ಇದು ದಿನ ನಿತ್ಯ ನಡೆಯುವ ಪ್ರಕರಣಗಳು..ಇವುಗಳ ಬಗ್ಗೆ ಗೊತ್ತಿದ್ದರೂ, ಬೇಲಿಯೇ ಹೊಲ ಮೇಯುತ್ತಿರುವುದರಿಂದ ಜನ ಬಾಯ್ಮುಚ್ಚಿಕೊಂಡು ಸುಮ್ಮನಾಗಬೇಕಾಗಿದೆ.







