ನೋಟು ರದ್ದತಿ ಪರಿಣಾಮ: ಇನ್ನೂ ಚೇತರಿಸಿಕೊಳ್ಳದ ಬೆಂಗಳೂರಿನ ವ್ಯಾಪಾರ ಪ್ರದೇಶಗಳು

ಬೆಂಗಳೂರು, ಜ.7: ನೋಟು ರದ್ದತಿಯಾದ ಎರಡು ತಿಂಗಳ ಬಳಿಕವೂ ಬೆಂಗಳೂರಿನ ವ್ಯಾಪಾರ ವಹಿವಾಟು ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಮಾರಾಟ ಹಾಗೂ ಚಿಲ್ಲರೆ ವಹಿವಾಟಿನ ಹಬ್ ಎನಿಸಿಕೊಂಡಿರುವ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಮಾಮೂಲ್‌ಪೇಟೆಯಲ್ಲಿ ಕಳೆದ ಎರಡು ತಿಂಗಳುಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಸುಧಾರಿಸಿದ್ದರೂ, ಮಂದವಾಗಿಯೇ ಚಟುವಟಿಕೆಗಳು ನಡೆಯುತ್ತಿವೆ.
ವ್ಯಾಪಾರಿಗಳು ಭಿನ್ನ ಅಂಕಿ-ಅಂಶಗಳನ್ನು ನೀಡುತ್ತಿದ್ದು, ಮಾಮೂಲಿ ವಹಿವಾಟಿನ ಶೇಕಡ 60ರಷ್ಟು ಮಾತ್ರ ಪರಿಸ್ಥಿತಿ ಸುಧಾರಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ. 500 ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದಾದ ಮೊದಲ ಕೆಲ ವಾರಗಳಲ್ಲಿ ಮಾಮೂಲಿ ವಹಿವಾಟಿನ ಪ್ರಮಾಣ ಮೂರನೆ ಒಂದು ಪಾಲಿಗೆ ಕುಸಿದಿತ್ತು.
''ಇದೀಗ ವಹಿವಾಟು ಹಿಂದಿನ ವರ್ಷ ಇದ್ದ ಸ್ಥಿತಿಗೆ ಇದೀಗ ತಲುಪಿದೆ. ನೋಟು ರದ್ದತಿ ನಿರ್ಧಾರ, ಸ್ವಚ್ಛಗೊಳಿಸುವ ಪ್ರಕ್ರಿಯೆಯಾಗಿದ್ದು, ನಮಗೆ ಧೀರ್ಘಾವಧಿ ಲಾಭ ತರುವ ಸಾಧ್ಯತೆ ಇದೆ. ಆದರೆ ವ್ಯಾಪಾರದ ವಿಚಾರಕ್ಕೆ ಬಂದರೆ ಇದು ಹೊಸದಾಗಿ ವಹಿವಾಟು ಆರಂಭಿಸುವಂತಾಗಿದೆ'' ಎಂದು ಆಭರಣ ವ್ಯಾಪಾರಿಯೊಬ್ಬರು ವಿವರಿಸಿದರು.
ಬಟ್ಟೆ ಬರೆ, ಆಭರಣ, ಬಳೆ, ಪುಸ್ತಕ, ಇಲೆಕ್ಟ್ರಾನಿಕ್ ವಸ್ತುಗಳು ಮತ್ತಿತರ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಿಗಳ ಪ್ರಕಾರ, ಈ ಸ್ಥಿತಿ ಮುಂದುವರಿಯಲು ಮುಖ್ಯ ಕಾರಣವೆಂದರೆ, ಖಾತೆಯಿಂದ ಹಣ ಪಡೆಯುವ ಮಿತಿಯನ್ನು ಚಾಲ್ತಿ ಖಾತೆಗೆ 50 ಸಾವಿರ ರೂ. ಹಾಗೂ ಉಳಿತಾಯ ಖಾತೆಗೆ 24 ಸಾವಿರ ರೂ. ಎಂದು ನಿಗದಿಪಡಿಸಿದ ಮಿತಿಯನ್ನು ವಿಸ್ತರಿಸದಿರುವುದು. ಎಲ್ಲ ವಹಿವಾಟಿಗೂ ತೀವ್ರ ಹೊಡೆತ ಬಿದ್ದಿದೆ ಎನ್ನುವುದು ಆಭರಣ ವ್ಯಾಪಾರಿ ಪ್ರಕಾಶ್ ಅವರ ವಿಶ್ಲೇಷಣೆ.
ಮಹಿಳೆಯರ ಪಾಶ್ಚಾತ್ಯ ಒಳ ಉಡುಪುಗಳ ಸಗಟು ಮಾರಾಟಗಾರ ಹಾಗೂ ಕರ್ನಾಟಕ ಒಳಉಡುಪು ಮಾರಾಟಗಾರರ ಸಂಘದ ಮಾಜಿ ಅಧ್ಯಕ್ಷ ಸಜ್ಜನ್‌ರಾಜ್ ಮೆಹ್ತಾ ಹೇಳುವಂತೆ, ಜನರ ಖಾತೆಗಳಲ್ಲಿ ಹಣ ಇದೆ. ಆದರೆ ಅದನ್ನು ವೆಚ್ಚ ಮಾಡಲು ಸರಕಾರ ಬಿಡುತ್ತಿಲ್ಲ. ತಮ್ಮ ಹಣವನ್ನು ಜನ ಬಳಸಲು ಯಾವುದೇ ಮಿತಿ ಇರಬಾರದು ಎನ್ನುವುದು ಅವರ ವಾದ.







