ಟ್ರಂಪ್ ಟ್ವೀಟ್ ತಂದ ಅಪಾಯ: ಪ್ರತಿಷ್ಠಿತ ಕಾರು ಕಂಪೆನಿಗೆ ಐದೇ ನಿಮಿಷಗಳಲ್ಲಿ 8 ಸಾವಿರ ಕೋಟಿ ನಷ್ಟ!

ವಾಷಿಂಗ್ಟನ್, ಜ.7: ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಒಂದು ಟ್ವೀಟ್ ಅದೆಷ್ಟು ಅಪಾಯ ತಂದೊಡ್ಡಿತೆಂದರೆ ಪ್ರತಿಷ್ಠಿತ ಅಟೊಮೊಬೈಲ್ ಕಂಪೆನಿ ಟೊಯೊಟಾ ಶೇರುಗಳು ಕೇವಲ ಐದು ನಿಮಿಷಗಳಲ್ಲಿ ಕುಸಿದು ಕಂಪೆನಿಗೆ ಬರೋಬ್ಬರಿ 8,156 ಕೋಟಿ ರೂ. ನಷ್ಟ ಉಂಟು ಮಾಡಿದೆ.
ಟೊಯೊಟಾ ಕಂಪೆನಿ ಮೆಕ್ಸಿಕೋದಲ್ಲಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಟ್ವೀಟ್ ಒಂದನ್ನು ಮಾಡಿ ಅದಕ್ಕೆ ಅವಕಾಶವಿಲ್ಲವೆಂದು ಹೇಳಿದರು. ‘‘ಅಮೆರಿಕದಲ್ಲಿ ನಿಮ್ಮ ತಯಾರಿಕಾ ಘಟಕ ಸ್ಥಾಪಿಸಿ, ಇಲ್ಲವೇ ದೊಡ್ಡ ಮೊತ್ತದ ಗಡಿ ತೆರಿಗೆ ಪಾವತಿಸಿ’’ ಎಂದು ಟ್ರಂಪ್ ಟ್ವೀಟ್ ಮಾಡಿದ ಐದೇ ನಿಮಿಷಗಳಲ್ಲಿ ಟೊಯೊಟಾ ಶೇರು ಬೆಲೆ ಕುಸಿಯಲಾರಂಭಿಸಿತ್ತು. ಟ್ರಂಪ್ ಟ್ವೀಟ್ ನಂತರ ದಿನದ ಶೇರು ಮಾರಕಟ್ಟೆ ಮುಚ್ಚುವ ಸಮಯಕ್ಕೆ ಟೊಯೊಟಾ ಶೇರು 0.5 ಶೇ. ಕುಸಿದಿತ್ತು.
ಟೊಯೊಟಾ ಕಂಪೆನಿ ತನ್ನ ಹೊಸ ಉತ್ಪಾದನಾ ಘಟಕವನ್ನು ಮೆಕ್ಸಿಕೋದ ಬಜ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಲುದ್ದೇಶಿಸಿತ್ತು. ಕಂಪೆನಿಯು ಇಲ್ಲಿ ಅದಾಗಲೇ ಒಂದು ಘಟಕವನ್ನು ಹೊಂದಿದೆ ಹಾಗೂ ಈ ಘಟಕ ವಾರ್ಷಿಕ ಒಂದು ಲಕ್ಷ ಪಿಕಪ್ ಟ್ರಕ್ ಗಳನ್ನು ತಯಾರಿಸುತ್ತಿದೆ. ಕಂಪೆನಿ ತನ್ನ ಈ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 1.6 ಲಕ್ಷಕ್ಕೆ ಏರಿಸುವ ಯೋಜನೆ ಹೊಂದಿದೆ.
ಟ್ರಂಪ್ ಅವರ ಟ್ವೀಟ್ ಕಂಪೆನಿಯೊಂದಕ್ಕೆ ನಷ್ಟ ಉಂಟು ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಇದರ ಸರಕಾರ ಗುತ್ತಿಗೆ ವೆಚ್ಚಗಳು ನಿಯಂತ್ರಣದಲ್ಲಿಲ್ಲ ಹಾಗೂ ಅದು 4 ಬಿಲಿಯನ್ ಡಾಲರ್ ಆಗಿದೆ ಎಂದು ಟ್ರಂಪ್ ಹೇಳಿದ ಪರಿಣಾಮ ಅದರ ಶೇರು ದರಗಳೂ ಕುಸಿದಿದ್ದವು.







