ಸಮೀಕ್ಷೆಯಿಂದ ಫಲಾನುಭವಿಗಳಿಗೆ ಅನ್ಯಾಯವಾದಲ್ಲಿ ಅಧಿಕಾರಿಗಳ ತಲೆತಂಡ: ಶಾಸಕ ಜೀವರಾಜ್ ಎಚ್ಚರಿಕೆ
ಎನ್.ಆರ್.ಪುರ, ಜ.7: ನಿವೇಶನ ನೀಡುವ ಸಮೀಕ್ಷೆಯಿಂದ ಫಲಾನುಭವಿಗಳಿಗೆ ಅನ್ಯಾಯವಾದಲ್ಲಿ ಅಂತಹ ಅಧಿಕಾರಿಗಳ ತಲೆತಂಡ ಖಚಿತ ಎಂದು ಶಾಸಕ ಡಿ.ಎನ್.ಜೀವರಾಜ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಆಶ್ರಯ ನಿವೇಶನ ಅರ್ಜಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ಯಾರೂ ಕೂಡ ಈ ರೀತಿ ಫಲಾನುಭವಿಗಳ ಸಮ್ಮುಖದಲ್ಲಿ, ಪ.ಪಂ.ನ ಎಲ್ಲ ಪಕ್ಷಗಳ ಸದಸ್ಯರ ಜತೆ ಆಶ್ರಯ ನಿವೇಶನ ಅರ್ಜಿಗಳ ಪರಿಶೀಲನೆ ನಡೆಸಿಲ್ಲ. ಅರ್ಹ ಬಡ ಫಲಾನುಭವಿಗಳಿಗೆ ಸೂರೊದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಆಯ್ಕೆಯಿಂದ ಯಾರೂ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂಬುವುದೇ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಆಶ್ರಯ ನಿವೇಶನಕ್ಕಾಗಿ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿದ ಶಾಸಕರು ಅರ್ಜಿಗಳಲ್ಲಿ ಅತ್ತೆ ಮನೆ ವಾಸ ಎಂದು ನಮೂದಿಸಲಾಗಿದೆ. ಅತ್ತೆ ಮನೆ ಎಂದರೆ ಗಂಡನ ಮನೆಯೇ ಆಗುತ್ತದೆ. ಈ ರೀತಿ ಸಮೀಕ್ಷೆ ಮಾಡಿದ ನೋಡೆಲ್ ಅಧಿಕಾರಿ ಮನಸ್ಥಿತಿ ಏನೆಂಬುವುದು ಅರ್ಥವಾಗುತ್ತಿಲ್ಲ. ಅಥವಾ ಅವರಿಂದ ಹಣ ಪಡೆದಿದ್ದೀರಾ? ಏಕೆ ಈ ರೀತಿ ನಮೂದಿಸಿದ್ದೀರಾ ಎಂದು ನೋಡೆಲ್ ಅಧಿಕಾರಿ ಕೃಷ್ಣಪ್ಪರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅರ್ಹ ಫಲಾನುಭವಿಗಳಿಗೆ ಸೂರೊದಗಿಸುವ ನಮ್ಮ ಕನಸ್ಸಿಗೆ ನೀರೆರೆಚದಿರಿ. ನಮ್ಮ ಮನಸ್ಸಿನಲ್ಲಿ ಸೂರೊದಗಿಸುವಲ್ಲಿ ಯಾವುದೇ ರಾಜಕಾರಣ ಇಟ್ಟುಕೊಂಡಿಲ್ಲ. ಸಮೀಕ್ಷೆ ಮಾಡುವಾಗ ನಿಗಾ ವಹಿಸಬೇಕು ಎಂದರು.
ಒಟ್ಟು 160 ಆಶ್ರಯ ನಿವೇಶನಗಳನ್ನು ಹಂಚಲು ನಮಗೆ ಅವಕಾಶವಿದೆ. ಇದಕ್ಕಾಗಿ ಸಾವಿರಾರು ಅರ್ಜಿಗಳು ಬರುತ್ತವೆ. ನಾವು ಅರ್ಜಿಗಳನ್ನು ಹೆಚ್ಚಿಸಿಕೊಳ್ಳುವ ಬದಲು ನಿವೇಶನಗಳಿಗೆ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ. ಹೆಚ್ಚು ಅರ್ಜಿಗಳು ಬಂದಲ್ಲಿ ಫಲಾನುಭವಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು. ಉಳಿದ ಅರ್ಜಿಗಳಿಗೆ ಮುಂದಿನ ಆಶ್ರಯ ನಿವೇಶನ ಹಂಚಿಕೆ ಸಂದರ್ಭದಲ್ಲಿ ಆದ್ಯತೆ ನೀಡಲಾಗುವುದು. ಯಾವುದೇ ಗೋಮಾಳ ಜಾಗವನ್ನು ಪ.ಪಂ. ಅಥವಾ ತಾ.ಪಂ., ಗ್ರಾಪಂಗಳಿಗೆ ನಿವೇಶನಕ್ಕಾಗಿ ನೀಡಲು ಏನು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಹಾಜರಿದ್ದ ಕಂದಾಯ ನಿರೀಕ್ಷಕ ಶ್ಯಾಮ್ ನಾಯ್ಕರನ್ನು ಪ್ರಶ್ನಿಸಿದರು.
ಕೆಲವು ಅರ್ಜಿದಾರರನ್ನು ಚರ್ಚಿಸಿದ ಶಾಸಕರು ಕೆಲ ಅರ್ಜಿದಾರರು ಆಶ್ರಯ ಮನೆಗಳಲ್ಲಿ ಬಾಡಿಗೆಗೆ ಇರುವುದಾಗಿ ಅವರು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಶ್ರಯ ವಸತಿ ನೋಡೆಲ್ ಅಧಿಕಾರಿ ಬಿ.ಎಚ್.ಷಡಕ್ಷರಿ, ಪ.ಪಂ. ಅಧ್ಯಕ್ಷ ಆರ್.ರಾಜಶೇಖರ್, ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಲಕ್ಷ್ಮಣ್ ಶೆಟ್ಟಿ, ಪಿ.ಆರ್.ಸುಕುಮಾರ್, ನಾಗರತ್ನಾ, ಆಶಾ ಶ್ರೀನಾಥ್, ಸಮೀರಾ ನಯೀಂ, ಅಂಜುಂ, ಆಶ್ರಯ ಸಮಿತಿ ಸದಸ್ಯ ಕೆ.ಎ.ಅಬೂಬಕರ್, ಬಿಜೆಪಿ ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಪಿ.ಜೆ.ಆ್ಯಂಟನಿ,, ರಾಜ್ಯ ಯುವ ಮೋರ್ಚಾದ ಬಿ.ಎಸ್.ಆಶೀಶ್‌ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ಗೋಪಾಲ್, ನಗರ ಘಟಕದ ಅಧ್ಯಕ್ಷ ಜಯರಾಂ, ಪ.ಪಂ. ಮಾಜಿ ಉಪಾಧ್ಯಕ್ಷ ಸುರಭಿ ರಾಜೇಂದ್ರ, ಅಲ್ಪ ಸಂಖ್ಯಾತ ಘಟಕದ ತಾಲೂಕು ಕಾರ್ಯದರ್ಶಿ ಸೈಯದ್ ಫರ್ವೀಝ್, ಎಂ.ಪಿ.ಸನ್ನಿ, ಮುಖ್ಯಾಧಿಕಾರಿ ಕುರಿಯ ಕೋಸ್ ಮತ್ತಿತರರಿದ್ದರು.







