ರೇವ ಶಂಕರ್ ಶರ್ಮ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ-2017

ಮೂಡುಬಿದಿರೆ, ಜ.7 : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ವಿರಾಸತ್‌ಗೆ ಪೂರಕವಾಗಿ ಆಳ್ವಾಸ್ ಶಿಲ್ಪ ವಿರಾಸತ್ ಹಾಗೂ ವರ್ಣವಿರಾಸತ್ ರಾಷ್ಟ್ರೀಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿರಿಯ ಚಿತ್ರಕಲಾವಿದರಿಗೆ ಕೊಡುವ ‘ಆಳ್ವಾಸ್ ವರ್ಣವಿರಾಸತ್2017ನೇ ಸಾಲಿನ ಪ್ರಶಸ್ತಿಗೆ ಪ್ರಸಿದ್ಧ ಚಿತ್ರಕಲಾವಿದ ರೇವ ಶಂಕರ್ ಶರ್ಮ ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇವ ಶಂಕರ್ ಶರ್ಮ:
1935 ಅಗಸ್ಟ್ 6ರಂದು ರಾಜಸ್ಥಾನದ ನತ್ವಾರಾಮ್ ಎಂಬಲ್ಲಿ ಜನಿಸಿದ ರೇವ ಶಂಕರ್ ಶರ್ಮರವರು ತಮ್ಮ 15ನೇ ವರ್ಷದಿಂದಲೇ ಕಲಾಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಪಿಚ್ಚಾಯಿ ಎಂಬ ಸಾಂಪ್ರದಾಯಿಕ ಚಿತ್ರಕಲಾ ಶೈಲಿಯನ್ನು ತನ್ನ ತಂದೆ ಜಗನ್ನಾಥ ಶರ್ಮರವರಿಂದ ಕಲಿತು ಬಳಿಕ ಪ್ರಸಿದ್ಧ ಘರಾನಾ ದಿವಂಗತ ಲಕ್ಷ್ಮೀಲಾಲ್‌ಜಿಯವರಲ್ಲಿ ಉನ್ನತ ಅಭ್ಯಾಸವನ್ನು ಮಾಡಿದರು.1981ರಲ್ಲಿ ಚಿಕಣಿ ಚಿತ್ರಕಲೆಗೆ, 2013ರಲ್ಲಿ ಶಿಲ್ಪಕಲೆಗೆ, ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಪಡೆದ ಶ್ರೀಯುತರು ಭಾರತ ಸರಕಾರದ ಪ್ರತಿನಿಧಿಯಾಗಿ ಅಮೇರಿಕಾದ ವಿವಿಧ ಪ್ರಸಿದ್ಧ ನಗರಗಳಲ್ಲಿ ಹಾಗೂ ರಾಷ್ಟ್ರದ ಹಲವು ನಗರಗಳಲ್ಲಿ ತಮ್ಮ ಚಿಕಣಿ ಚಿತ್ರಕಲೆಯನ್ನು ಪ್ರದರ್ಶನ ಮಾಡಿದ್ದಾರೆ.







