ಪಾನನಿಷೇಧವನ್ನು ಬೆಂಬಲಿಸಿ 11,000 ಕಿ.ಮೀ.ಉದ್ದದ ಮಾನವ ಸರಪಳಿ ರಚನೆಗೆ ಬಿಹಾರ ಸಿಎಂ ನಿತೀಶ್ ಯೋಜನೆ

ಪಟ್ನಾ,ಜ.7: ಪಾನನಿಷೇಧ ಕುರಿತು ಜನಜಾಗೃತಿಯನ್ನು ಮೂಡಿಸಲು ಹಮ್ಮಿ ಕೊಳ್ಳಲಾಗಿರುವ ಮಾನವ ಸರಪಳಿಯ ಉದ್ದವನ್ನು ದ್ವಿಗುಣಗೊಳಿಸಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಿರ್ಧರಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಪಾನನಿಷೇಧವನ್ನು ಜಾರಿಗೊಳಿಸಿದ್ದಕ್ಕಾಗಿ ನಿತೀಶರನ್ನು ಪ್ರಶಂಸಿಸಿದ್ದರು.
ಪಾನನಿರೋಧ ನೀತಿಗೆ ಜನಸಾಮಾನ್ಯರ ಬೆಂಬಲವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಿತೀಶ ಜ.21ರಂದು 5,000 ಕಿ.ಮೀ. ಉದ್ದದ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈಗ ಈ ಮಾನವ ಸರಪಳಿಯ ಉದ್ದವನ್ನು 11,000 ಕಿ.ಮೀ.ಗೆ ಹೆಚ್ಚಿಸಲು ಅವರು ನಿರ್ಧರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎರಡು ಕೋಟಿಗೂ ಅಧಿಕ ಜನರು ಪಾಲ್ಗೊಳ್ಳುವಂತೆ ಮಾಡಲು ಬಿಹಾರ ಸರಕಾರವು ಪ್ರಯತ್ನಗಳನ್ನು ನಡೆಸುತ್ತಿದ್ದು, ಇದು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವದ ಅತ್ಯಂತ ಬೃಹತ್ ಜನ ಪಾಲ್ಗೊಳ್ಳುವಿಕೆಯಾಗಲಿದೆ.
ಮಾನವ ಸರಪಳಿಯ ಸಮಯವಿನ್ನೂ ನಿಗದಿಯಾಗಿಲ್ಲ, ಆದರೆ ಅದು ಅರ್ಧ ಗಂಟೆಯ ಅವಧಿಯೊಳಗೆ ನಡೆಯಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ವೈಮಾನಿಕ ಛಾಯಾ ಚಿತ್ರಗ್ರಹಣಕ್ಕಾಗಿ ಹಲವಾರು ಡ್ರೋಣ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತದೆ. ಉಪಗ್ರಹ ಚಿತ್ರಗಳಿಗಾಗಿ ರಾಜ್ಯ ಸರಕಾರವು ಇಸ್ರೋವನ್ನು ಸಂಪರ್ಕಿಸಿದೆ.
ರಾಜ್ಯ ಸರಕಾರದ ಲೆಕ್ಕಾಚಾರದಂತೆ ಒಂದು ಕಿ.ಮೀ.ತ್ರಿಜ್ಯದಲ್ಲಿ 2,000 ಜನರು ಪರಸ್ಪರ ಕೈಗಳನ್ನು ಜೋಡಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯ ಗುರಿಯನ್ನು ಎರಡು ಕೋಟಿಗೆ ಹೆಚ್ಚಿಸಿರುವುದರಿಂದ ಅಗತ್ಯವಿರುವ ಪ್ರದೇಶವನ್ನೂ ಹೆಚ್ಚಿಸಲಾಗಿದೆ. ಬಿಹಾರದಲ್ಲಿ ಕಳೆದ ವರ್ಷದ ಎಪ್ರಿಲ್‌ನಿಂದ ಪಾನನಿಷೇಧ ಜಾರಿಗೊಂಡಿದೆ.







