ಆಸ್ಪತ್ರೆಯಿಂದ ಮಗಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಆದಿವಾಸಿ

ಭುವನೇಶ್ವರ,ಜ.7: ಒಡಿಶಾದ ಕಾಲಹಂದಿಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ತನ್ನ ಪತ್ನಿಯ ಶವವನ್ನು ಹೊತ್ತುಕೊಂಡು 10 ಕಿ.ಮೀ.ಗೂ ಅಧಿಕ ದೂರವನ್ನು ಕಾಲ್ನಡಿಗೆ ಯಲ್ಲಿಯೇ ಸವೆಸಿದ್ದ ಆದಿವಾಸಿ ದಾನಾ ಮಜ್ಹಿಯ ನೆನಪು ಮಾಸುವ ಮುನ್ನವೇ ಅಂತಹುದೇ ಇನ್ನೊಂದು ಘಟನೆ ಅಂಗುಲ ಜಿಲ್ಲೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಐದರ ಹರೆಯದ ಮಗಳ ಶವವನ್ನು ಅಂತ್ಯಕ್ರಿಯೆಗಾಗಿ ತನ್ನ ಗ್ರಾಮಕ್ಕೆ ಸಾಗಿಸಲು ಸಕಾಲದಲ್ಲಿ ವಾಹನ ದೊರೆಯದೇ ಹತಾಶನಾಗಿದ್ದ ಗಾಟಿ ಧಿಬಾರ್ ಸುಮಾರು ಒಂದು ಕಿ.ಮೀ.ನಷ್ಟು ದೂರ ಅದನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿದ್ದಾನೆ.ಈ ದೃಶ್ಯ ಮೊಬೈಲ್ ಫೋನ್‌ಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ.
ಒಡಿಶಾದಲ್ಲಿ ದುರ್ಬಲ ವರ್ಗಗಳಿಗಾಗಿ ಮಹಾಪ್ರಯಾಣ ಯೋಜನೆಯಡಿ ಉಚಿತ ಶವಸಾಗಾಟ ಸೇವೆ ಅಸ್ತಿತ್ವದಲ್ಲಿದೆ. ಶವಸಾಗಾಟಕ್ಕೆ ಮೃತರ ಕುಟುಂಬ ವರ್ಗದವರ ಬಳಿ ಹಣವಿಲ್ಲದಿದ್ದರೆ ಶವಗಳನ್ನು ಘನತೆಯಿಂದ ವಿಲೇವಾರಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ಶವಸಾಗಾಟ ವಾಹನಗಳು ಜಿಲ್ಲಾಸ್ಪತ್ರೆಗಳ ಆವರಣದಲ್ಲಿ ನಿಂತಿರುತ್ತವೆಯೇ ಹೊರತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿಲ್ಲ.
ತನ್ನ ಮಗಳು ಸುಮಿ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದಾಗ ಧಿಬಾರ್ ಅಧಿಕಾರಿಗಳಿಗೆ ತಿಳಿಸದೆ ಮಗಳ ಶವವನ್ನು ಹೊತ್ತುಕೊಂಡು ಪಲ್ಲಹರ ಸಮುದಾಯ ಆರೋಗ್ಯ ಕೇಂದ್ರದಿಂದ ಹೊರಬಿದ್ದಿದ್ದ. ಆದರೆ ಅಸ್ಪತ್ರೆಯ ಅಧಿಕಾರಿಗಳು ಮುಂದಿನ ಯಾವುದೇ ಜವಾಬ್ದಾರಿಯನ್ನು ವಹಿಸಿರಲಿಲ್ಲ.
ಈ ಸಮುದಾಯ ಕೇಂದ್ರದಲ್ಲಿ ಶವಸಾಗಾಟ ವಾಹನವಿಲ್ಲ. ಆದರೆ ಅಗತ್ಯವಾದಾಗ ದೂರವಾಣಿ ಕರೆ ಮಾಡಿ ಜಿಲ್ಲಾಸ್ಪತ್ರೆಯಿಂದ ವಾಹನವನ್ನು ತರಿಸಲಾಗುತ್ತದೆ. ಧಿಬಾರ್ ಮನವಿ ಮಾಡಿಕೊಂಡು ಸ್ವಲ್ಪ ಹೊತ್ತು ಕಾದಿದ್ದರೆ ಶವಸಾಗಾಟ ವಾಹನ ಲಭ್ಯವಾಗುತ್ತಿತ್ತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಸಾಮಾನ್ಯವಾಗಿ ಶವಗಳನ್ನು ಸ್ಥಳೀಯ ವಾಹನಗಳಲ್ಲಿ ಸಾಗಿಸಲಾಗುತ್ತದೆ ಮತ್ತು ಆದಿವಾಸಿಗಳಿಗೆ ಸ್ಥಳೀಯ ರೆಡ್‌ಕ್ರಾಸ್ ಮೂಲಕ ತಕ್ಷಣವೇ ವೆಚ್ಚವನ್ನು ಪಾವತಿಸ ಲಾಗುತ್ತದೆ. ಧಿಬಾರ್ ಮಗಳ ಶವವನ್ನು ಹೊತ್ತುಕೊಂಡು ಸಾಗುತ್ತಿದ್ದಾಗ ಆತನನ್ನು ತಡೆಯದೇ ಕರ್ತವ್ಯಲೋಪವೆಸಗಿದ್ದಕ್ಕಾಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಉಪವಿಭಾಗ ವೈದ್ಯಾಧಿಕಾರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿಲ್ ಕುಮಾರ ಸಮಾಲ್ ಅವರು ಸುದ್ದಿಗಾರರಿಗೆ ತಿಳಿಸಿದರು.







