ಪರಮೇಶ್ವರ್ ಎರಡು ಹುದ್ದೆ : ಎಚ್.ವಿಶ್ವನಾಥ್ ಆಕ್ಷೇಪ

ಬೆಂಗಳೂರು, ಜ.7: ಕಾಗ್ರೆಂಸ್ ನಿಯಮದ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ ಇರುವುದು. ಆದರೆ, ಡಾ.ಜಿ.ಪರಮೇಶ್ವರ್‌ರವರು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಇಲಾಖೆಯ ಸಚಿವ ಎರಡೂ ಸ್ಥಾನ ಹೊಂದಿರುವುದು ಹೇಗೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಭಾನುವಾರ ಮಾಸಿಕ ಪತ್ರಿಕಾ ಬಳಗವು ‘ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಪ್ರಸ್ತುತತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಉನ್ನತ ಸ್ಥಾನದಲ್ಲಿರುವವರೇ ತಪ್ಪು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಅಂತರಿಕ ಪ್ರಜಾಪ್ರಭುತ್ವವಿದ್ದು, ಮುಕ್ತವಾಗಿ ಚರ್ಚೆ ನಡೆಸುವುದಕ್ಕೆ ಅವಕಾಶವಿದೆ. ಹೀಗಾಗಿ ಪಕ್ಷದಲ್ಲಿರುವ ಕೆಲವು ಭಿನ್ನಾಭಿಪ್ರಾಯಗಳನ್ನು ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ನಾನು ಬಹಿರಂಗವಾಗಿಯೇ ಚರ್ಚಿಸಿದ್ದೇವೆ. ಇದನ್ನೇ ನೆಪವಾಗಿಟ್ಟು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಮ್ಮ ವಿರುದ್ದ ಎಐಸಿಸಿಗೆ ದೂರು ಕೊಟ್ಟಿದ್ದಾರೆ. ಇಂತಹ ದೂರುಗಳಿಗೆ ಸರಿಯಾಗಿಯೇ ಉತ್ತರ ನೀಡಲಿದ್ದೇವೆ ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಾನು ಹಾಗೂ ಜನಾರ್ದನ ಪೂಜಾರಿ ಅಶೋಕವನದಲ್ಲಿರುವ ಸೀತೆಯಂತಾಗಿದ್ದೇವೆ. ಪಕ್ಷಕ್ಕಾಗಿ ಹಗಲಿರುಳು ಪ್ರಾಮಾಣಿಕವಾಗಿ ದುಡಿದಿದ್ದೇವೆ. ನಮ್ಮ ರೀತಿಯಲ್ಲಿಯೇ ಸಾವಿರಾರು ಕಾರ್ಯಕರ್ತರು ಶ್ರಮಿಸಿದ ಫಲವಾಗಿಯೇ ಈ ದಿನ ಕಾಂಗ್ರೆಸ್ ಅಧಿಕಾರದಲ್ಲಿರುವುದು ಎಂಬುದನ್ನು ಮರೆಯಬಾರದು. ಹೀಗಾಗಿ ಪಕ್ಷದ ಒಳಿತಿಗಾಗಿ ಪ್ರಶ್ನಿಸುವ ಹಕ್ಕು ನಮಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ನಡೆದಿರುವ ಲೈಂಗಿಕ ಕಿರುಕುಳದ ಕುರಿತು ಮಾಹಿತಿ ಇಲ್ಲವೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳುತ್ತಿರುವುದು ನಾಚಿಕೆಗೇಡು. ನಗರದ ನಡೆಯುತ್ತಿರುವ ಪ್ರತಿಯೊಂದು ಘಟನೆಗಳ ಕುರಿತು ಪೊಲೀಸ್ ಅಧಿಕಾರಿಗಳು ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುತ್ತಿರುತ್ತಾರೆ. ಇಷ್ಟಾಗಿಯೂ ಮಾಹಿತಿಯಿಲ್ಲವೆಂದು ಹೇಳಿರುವುದು ಜನತೆ ಮಾಡುವ ಮೋಸವೆಂದು ಅವರು ಹೇಳಿದರು.







