ಸೈನಿಕನಿಂದ ಅಮೆರಿಕ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ
5 ಸಾವು; 8 ಮಂದಿಗೆ ಗಾಯ: ದಾಳಿಕೋರ ವಶಕ್ಕೆ

ಫೋರ್ಟ್ ಲಾಡರ್‌ಡೇಲ್ (ಅಮೆರಿಕ), ಜ. 7: ಇರಾಕ್‌ನಲ್ಲಿ ಯುದ್ಧ ಮಾಡಿದ್ದ ಅಮೆರಿಕದ ಸೈನಿಕನೊಬ್ಬ ಫೋರ್ಟ್ ಲಾಡರ್‌ಡೇಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಗುಂಡಿನ ದಾಳಿ ನಡೆಸಿ ಐವರನ್ನು ಕೊಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಗುಂಡಿನ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡರು. ಗುಂಡು ಹಾರಾಟದ ವೇಳೆ ಗಾಬರಿಗೊಂಡ ಜನರು ಅಡಗಿಕೊಳ್ಳಲು ಟರ್ಮಿನಲ್ ಮತ್ತು ಟಾರ್ಮ್ಯಾಕ್‌ನಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಿದರು.
ದಾಳಿಕೋರನನ್ನು 26 ವರ್ಷದ ಎಸ್ಟಬನ್ ಸಾಂಟಿಯಾಗೊ ಎಂದು ಗುರುತಿಸಲಾಗಿದೆ. ಆತನು ಅಮೆರಿಕದ ಸೇನಾ ಗುರುತು ಚೀಟಿಯನ್ನು ಹೊಂದಿದ್ದನು ಎಂದು ಫ್ಲೋರಿಡದ ಸೆನೆಟರ್ ಬಿಲ್ ನೆಲ್ಸನ್‌ರ ವಕ್ತಾರರೊಬ್ಬರು ಸಾರಿಗೆ ಭದ್ರತಾ ಆಡಳಿತ (ಟಿಎಸ್‌ಎ)ದ ಅಧಿಕಾರಿಗಳನ್ನು ಉಲ್ಲೇಖಿಸಿ ಹೇಳಿದರು.
ತನ್ನ ಮನಸ್ಸನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂಬುದಾಗಿ ಸಾಂಟಿಯಾಗೊ ಎಫ್‌ಬಿಐಗೆ ನವೆಂಬರ್‌ನಲ್ಲಿ ಹೇಳಿದ್ದನು. ಆಗ, ಎಫ್‌ಬಿಐ ಆತನನ್ನು ಮಾನಸಿಕ ಆಸ್ಪತ್ರೆಯೊಂದಕ್ಕೆ ಕಳುಹಿಸಿತ್ತು ಎಂದು ಫೆಡರಲ್ ಕಾನೂನು ಅನುಷ್ಠಾನ ಅಧಿಕಾರಿಯೊಬ್ಬರು ಹೇಳಿದರು.
ಸಾಂಟಿಯಾಗೊ 2007ರಿಂದ 2016ರವರೆಗೆ ಪೋರ್ಟರಿಕೊ ನ್ಯಾಶನಲ್ ಗಾರ್ಡ್ ಮತ್ತು ಅಲಾಸ್ಕ ನ್ಯಾಶನಲ್ ಗಾರ್ಡ್‌ಗಳಲ್ಲಿ ಕೆಲಸ ಮಾಡಿದ್ದಾನೆ. 2010ರಿಂದ 2011ರವರೆಗೆ ಆತ ಇರಾಕ್‌ನಲ್ಲಿ ಕೆಲಸ ಮಾಡಿದ್ದನು ಎಂದು ಪೆಂಟಗನ್ ತಿಳಿಸಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಆತನನ್ನು ನಿಷ್ಕ್ರಿಯ ಮೀಸಲು ಪಡೆಗೆ ವರ್ಗಾಯಿಸಲಾಗಿತ್ತು.
ಗುಂಡುಗಳು ಖಾಲಿಯಾಗುವವರೆಗೂ ವಿರಮಿಸಲಿಲ್ಲ :
ದಾಳಿಕೋರನು ಫೋರ್ಟ್ ಲಾಡರ್‌ಡೇಲ್‌ಗೆ ವಿಮಾನದಲ್ಲಿ ಬಂದನು. ಆತನ ಚೀಲದಲ್ಲಿದ್ದ ಬಂದೂಕನ್ನು ತಪಾಸಣೆ ನಡೆಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ತನ್ನ ಚೀಲವನ್ನು ಪಡೆದುಕೊಂಡ ಬಳಿಕ ಬಂದೂಕಿಗೆ ಗುಂಡುಗಳನ್ನು ತುಂಬಿಸಲು ಆತನು ಶೌಚಾಲಯಕ್ಕೆ ಹೋದನು ಎಂದು ಬ್ರೊವಾರ್ಡ್ ಕೌಂಟಿ ಕಮಿಶನರ್ ಚಿಪ್ ಲಾ ಮರ್ಕ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಆತ ಗುಂಡು ಹಾರಿಸುತ್ತಲೇ ಶೌಚಾಲಯದಿಂದ ಹೊರಗೆ ಬಂದನು ಹಾಗೂ ಬಂದೂಕಿನಲ್ಲಿದ್ದ ಗುಂಡುಗಳು ಖಾಲಿಯಾದ ಬಳಿಕವಷ್ಟೇ ವಿರಮಿಸಿದನು. ಬಳಿಕ ಆತ ಪೊಲೀಸರಿಗೆ ಶರಣಾದನು.







