ದೇಶದ ಬಡಜನರನ್ನು ಬೀದಿಪಾಲು ಮಾಡಿದ ನರೇಂದ್ರ ಮೋದಿ : ಪ್ರಮೋದ್ ಮಧ್ವರಾಜ್
ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಉಡುಪಿ, ಜ.7: ದಿಢೀರನೇ 500ರೂ. ಹಾಗೂ 1,000ರೂ. ಮುಖಬೆಲೆ ನೋಟುಗಳನ್ನು ಅಮಾನ್ಯಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ್ದು, ಈ ಮೂಲಕ ಬಡಜನರನ್ನು ಬೀದಿ ಪಾಲು ಮಾಡಿದ್ದಾರೆ ಎಂದು ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ನೋಟುರದ್ಧತಿಯ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ತನಗೆ 50 ದಿನಗಳ ಕಾಲಾವಕಾಶ ನೀಡಿದರೆ ಎಲ್ಲವನ್ನು ಸರಿಪಡಿಸಿ ಅಚ್ಛೇದಿನವನ್ನು ನೀಡುವುದಾಗಿ ತಿಳಿಸಿದ್ದರು. ಆದರೆ 50 ದಿನ ಕಳೆದು 55 ದಿನಗಳು ದಾಟಿದರೂ ನೋಟುಗಳ ರದ್ಧತಿಯಿಂದ ಬಡವನಿಗಾದ ತೊಂದರೆಯಿಂದ ಮುಕ್ತಿಯೇ ಸಿಕ್ಕಿಲ್ಲ. ಒಬ್ಬನೇ ಒಬ್ಬ ಬಡ ಕಾರ್ಮಿಕನಿಗೆ, ಬಡ ವ್ಯಾಪಾರಿಯ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಯಾವುದೇ ದೇಶದಲ್ಲಿ ಆಳುವ ಪಕ್ಷವೊಂದು ಇಂಥ ನಿರ್ಧಾರವನ್ನು ಕೈಗೊಂಡಿದ್ದರೆ ಅಲ್ಲಿ ಜನ ದಂಗೆ ಏಳುತ್ತಿದ್ದರು. ಆದರೆ ಭಾರತದ ಜನತೆ ತಾಳ್ಮೆಗೆ ಹೆಸರಾದವರು. ಹೀಗಾಗಿ ಅವರು 50 ದಿನವನ್ನು ತಾಳ್ಮೆಯಿಂದ ಕಾದರೂ, ಸರಕಾರ ಅವರಿಗೆ ನೀಡಿದ ವಚನವನ್ನು ಪಾಲಿಸದೇ ವಚನಭ್ರಷ್ಟವಾಗಿದೆ ಎಂದು ಪ್ರಮೋದ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು ಮಾತನಾಡಿ, ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣದ ಮೂಲಕ ದೇಶದಲ್ಲಿ ಕೃತಕ ತುರ್ತುಪರಿಸ್ಥಿತಿಯನ್ನು ಹೇರಿದ್ದಾರೆ. ಇದನ್ನು ನಾವು ಉಗ್ರವಾಗಿ ಪ್ರತಿಭಟಿಸಬೇಕು ಎಂದರು.
ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾರ್ಕಳದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೇಲಿಯೊ, ಯುವ ಕಾಂಗ್ರೆಸ್ ನಾಯಕ ವಿಕಾಸ ಹೆಗ್ಡೆ, ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಾವರ ನಾಗೇಶ್ ಕುಮಾರ್ ಮುಂತಾದವರು ಮಾತನಾಡಿದರು.
ಕಾಂಗ್ರೆಸ್ ನಾಯಕರಾದ ನರಸಿಂಹ ಮೂರ್ತಿ, ಜನಾರ್ದನ ತೋನ್ಸೆ, ಜನಾರ್ದನ ಭಂಡಾರ್ಕರ್, ಹರೀಶ್ ಕಿಣಿ, ನಗರಸಭಾ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷ ಸಂಧ್ಯಾ ತಿಲಕ್‌ರಾಜ್, ಎಂ.ಪಿ.ಮೊಯ್ದಿನಬ್ಬ, ಸತೀಶ್ ಅಮೀನ್ ಪಡುಕೆರೆ, ಅಮೃತ್ ಶೆಣೈ, ಶಬ್ಬೀರ್ ಅಹಮ್ಮದ್, ಹಬೀಬ್ ಅಲಿ, ದಿನೇಶ್ ಸುವರ್ಣ, ದಿವಾಕರ ಕುಂದರ್, ಕಿದಿಯೂರು ಭಾಸ್ಕರ ರಾವ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಘೋಷಣೆಯನ್ನು ಕೂಗುತ್ತಾ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಬಳಿಕ ಎಐಸಿಸಿಯ ವೀಕ್ಷಕರಾಗಿ ಬಂದಿರುವ ತಮಿಳುನಾಡಿನ ಮಾಜಿ ಶಾಸಕ ಡಾ.ವಿಷ್ಣುಪ್ರಸಾದ್ ಹಾಗೂ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ, ಉಡುಪಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿ ಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು.







