ಈ ಬಾರಿ ಹಜ್ ಯಾತ್ರಿಗಳ ಸಂಖ್ಯೆ ಏರಿಸಲು ಸೌದಿ ನಿರ್ಧಾರ

ಜಿದ್ದಾ, ಜ. 7: ಈ ವರ್ಷ ಹಜ್ ಕೋಟವನ್ನು ಹೆಚ್ಚಿಸುವ ಸೌದಿ ಅರೇಬಿಯದ ನಿಲುವನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ.2016ರಲ್ಲಿ 10 ವರ್ಷಗಳಲ್ಲೇ ಕಡಿಮೆ ಸಂಖ್ಯೆಯ ಯಾತ್ರಿಕರು ಹಜ್‌ಗೆ ಆಗಮಿಸಿದ್ದರು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಈ ಬಾರಿ ಹಜ್ ಋತುವಿನಲ್ಲಿ ಸೌದಿ ಅರೇಬಿಯದ ಒಳಗಿನಿಂದ ಮತ್ತು ಹೊರಗಿನಿಂದ ಯಾತ್ರೆ ಕೈಗೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಗುರುವಾರ ಅಂಗೀಕಾರ ನೀಡಿದ್ದಾರೆ.
ಕಳೆದ ವರ್ಷ ಸುಮಾರು 1,36,000 ಭಾರತೀಯ ಯಾತ್ರಿಗಳು ಹಜ್‌ಗೆ ಆಗಮಿಸಿದ್ದಾರೆ. ಸೌದಿ ಅರೇಬಿಯವು ಹಜ್ ಕೋಟವನ್ನು 20 ಶೇಕಡದಷ್ಟು ಕಡಿಮೆ ಮಾಡಿದ್ದೇ ಇದಕ್ಕೆ ಕಾರಣ. 2012ರಲ್ಲಿ 1,70,000 ಭಾರತೀಯರು ಹಜ್ ಯಾತ್ರೆ ಕೈಗೊಂಡಿದ್ದರು.
ಈ ತಿಂಗಳ ಕೊನೆಯಲ್ಲಿ ಸಚಿವ ಸಂಪುಟ ಸಭೆ ನಡೆದ ಬಳಿಕ ಈ ವರ್ಷದ ಯಾತ್ರಿಗಳ ಸಂಖ್ಯೆಯನ್ನು ಘೋಷಿಸಲಾಗುವುದು.ಕಳೆದ ವರ್ಷ ಮಸ್ಜಿದುಲ್ ಹರಾಂನಲ್ಲಿ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಸೌದಿ ಅರೇಬಿಯ ಸರಕಾರವು ಸೌದಿ ಯಾತ್ರಿಕರ ಸಂಖ್ಯೆಯಲ್ಲಿ 50 ಶೇಕಡ ಮತ್ತು ವಿದೇಶಿ ಯಾತ್ರಿಕರ ಸಂಖ್ಯೆಯಲ್ಲಿ 20 ಶೇಕಡ ಕಡಿತವನ್ನು ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.
ಹಜ್ ಯಾತ್ರಿಕರ ಸಂಖ್ಯೆಯನ್ನು ಐದು ವರ್ಷಗಳ ಹಿಂದೆ ಇದ್ದ ಮಟ್ಟಕ್ಕೆ ಹಂತ ಹಂತವಾಗಿ ಏರಿಸಲಾಗುವುದು ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.







