ಸರಕಾರಿ ನೌಕರರ ಶಿರವಸ್ತ್ರ ಧಾರಣೆ ನಿಷೇಧಕ್ಕೆ ಆಸ್ಟ್ರಿಯ ಸಜ್ಜು

ಯೆನ್ನಾ (ಆಸ್ಟ್ರಿಯ), ಜ. 7: ಶಾಲಾ ಶಿಕ್ಷಕಿಯರು ಸೇರಿದಂತೆ ಸರಕಾರಿ ನೌಕರರು ಶಿರವಸ್ತ್ರವನ್ನು ಧರಿಸುವುದನ್ನು ನಿಷೇಧಿಸಲು ಬಯಸಿರುವುದಾಗಿ ಆಸ್ಟ್ರಿಯದ ವಿದೇಶ ವ್ಯವಹಾರಗಳು ಮತ್ತು ಏಕತೆ ಸಚಿವ ಸೆಬಾಸ್ಟಿಯನ್ ಕುರ್ಝ್ ಶುಕ್ರವಾರ ಹೇಳಿದ್ದಾರೆ.
ಕ್ರಿಶ್ಚಿಯನ್ ಕನ್ಸರ್ವೇಟಿವ್ ಪೀಪಲ್ಸ್ ಪಾರ್ಟಿ (ಒವಿಪಿ)ಯ ಕುರ್ಝ್ ಹಾಗೂ ಮುಸ್ಲಿಮ್ ಸಚಿವರೊಬ್ಬರು ಈ ಸಂಬಂಧ ಕರಡು ಮಸೂದೆಯೊಂದನ್ನು ರೂಪಿಸುತ್ತಿದ್ದಾರೆ.
ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡರೆ, ರಾಷ್ಟ್ರವ್ಯಾಪಿ ನಿಷೇಧವು ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಜಾರಿಯಲ್ಲಿರುವ ಕಾನೂನಿಗಿಂತಲೂ ಕಠಿಣವಾಗಿರುತ್ತದೆ.
ಫ್ರಾನ್ಸ್‌ನಲ್ಲಿ ಸಂಪೂರ್ಣ ಮೈಮುಚ್ಚುವ ಬುರ್ಖಾವನ್ನು ಮಾತ್ರ ನಿಷೇಧಿಸಲಾಗಿದೆ. ಅದೇ ವೇಳೆ, ಜರ್ಮನಿಯಲ್ಲಿ ಶಿಕ್ಷಕಿಯರು ಶಿರವಸ್ತ್ರ ಧರಿಸುವುದನ್ನು ನಿಷೇಧಿಸುವ ಸಂಸದರ ಅಧಿಕಾರವನ್ನು ದೇಶದ ಅತ್ಯುನ್ನತ ನ್ಯಾಯಾಲಯವು 2015ರಲ್ಲಿ ಮೊಟಕುಗೊಳಿಸಿದೆ.
Next Story





