ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ
.jpg)
ಬೆಂಗಳೂರು, ಜ. 7: ಪ್ರವಾಸದ ಮಹತ್ವ ಸಾರುವ ‘ಪ್ರವಾಸಿ ಭಾರತೀಯ ದಿವಸ್’ ಸಮಾರಂಭದಲ್ಲಿ ನಾಳೆ(ಜ.8)ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ರಾತ್ರಿಯೇ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಮುಗಿಸಿಕೊಂಡು ಅಲ್ಲಿಂದ ನೇರವಾಗಿ ವಿಶೇಷ ವಿಮಾನದಲ್ಲಿ ರಾತ್ರಿ 11:30ರ ಸುಮಾರಿಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಸಿದ್ದರಾಮಯ್ಯ, ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಬರಮಾಡಿಕೊಳ್ಳಲಿದ್ದಾರೆ.
ರಾಜಭವನದಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಭವನದಲ್ಲಿ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಹಲವು ಗಣ್ಯರು ಅವರೊಂದಿಗೆ ಇರಲಿದ್ದಾರೆ ಎಂದು ಗೊತ್ತಾಗಿದೆ.
ಜ.8ರ ಬೆಳಗ್ಗೆ 10ಗಂಟೆಯ ಸುಮಾರಿಗೆ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ನಡೆಯುತ್ತಿರುವ ‘ಪ್ರವಾಸಿ ಭಾರತೀಯ ದಿವಸ್’ ಸಮಾರಂಭದಲ್ಲಿ ದೇಶ-ವಿದೇಶಗಳ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪೋರ್ಚ್‌ಗಲ್ ಪ್ರಧಾನಿ ಎಚ್.ಇ.ಡಾ. ಅಂಟೋನಿ ಕೊಸ್ಟ್, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಬಂಡವಾಳ ಹೂಡಿಕೆಗೆ ಪ್ರಧಾನಿ ಸಮ್ಮುಖದಲ್ಲಿ ಒಡಂಬಡಿಕೆಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.
ಪ್ರಧಾನಿ ಮೋದಿ ರಾಜಭವನದಲ್ಲಿ ವಾಸ್ತವ ಹೂಡಲಿದ್ದು, ಜ.8ರ ಬೆಳಗ್ಗೆ ಎಚ್‌ಎಲ್‌ಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬಿಐಇಸಿ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಹೋಗಿ, ಅಲ್ಲಿಂದ ಸಮಾವೇಶಕ್ಕೆ ಕಾರಿನಲ್ಲಿ ತೆರಳಲಿದ್ದಾರೆ.
ಪ್ರವಾಸಿ ಭಾರತೀಯ ದಿವಸ್ ಸಮಾರಂಭದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲದೆ, ಪ್ರಧಾನಿ ವಾಸ್ತವ್ಯ ಹೂಡಲಿರುವ ರಾಜಭವನ ಸೇರಿದಂತೆ ಐಷಾರಾಮಿ ಹೊಟೇಲ್‌ಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.







