ಗ್ರೀನ್‌ವ್ಯಾಲಿ ನ್ಯಾಷನಲ್ ಸ್ಕೂಲ್, ಪಿಯು ಕಾಲೇಜಿನ ವಾರ್ಷಿಕೋತ್ಸವ

ಉಡುಪಿ,ಜ.6: ಶಿರೂರಿನ ಗ್ರೀನ್‌ವ್ಯಾಲಿ ನ್ಯಾಶನಲ್ ಶಾಲೆ ಹಾಗೂ ಪಿಯು ಕಾಲೇಜ್‌ನ 16ನೆ ವಾರ್ಷಿಕೋತ್ಸವವು ಶುಕ್ರವಾರ ನಡೆಯಿತು. ಬ್ರಹ್ಮಾವರದ ಲಿಟಿಲ್ ರಾಕ್ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲ ಮ್ಯಾಥ್ಯೂ ಸಿ.ನಿನಾನ್ ಮುಖ್ಯಅತಿಥಿಯಾಗಿ ಆಗಮಿಸಿದ್ದರು.
ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸೈಯದ್ ಅಬ್ದುಲ್ ಖಾದರ್ ಬಾಶು ಅಧ್ಯಕ್ಷತೆ ವಹಿಸಿದ್ದರು.
ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಹಾಗೂ ಮಂಗಳೂರಿನ ವಿಶ್ವಾಸ್ ಬಾವಾ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಾಂಶುಪಾಲ ಜಾನ್ ಮ್ಯಾಥ್ಯೂ ವಾರ್ಷಿಕ ವರದಿಯನ್ನು ಮಂಡಿಸಿ, ಗ್ರೀನ್‌ವ್ಯಾಲಿ ಶಾಲೆ ಹಾಗೂ ಪಿಯು ಕಾಲೇಜ್ ಉನ್ನತ ದರ್ಜೆಯ ಶಿಕ್ಷಣಸಂಸ್ಥೆಯಾಗಿ ಬೆಳೆದು ಬಂದ ಬಗೆಯನ್ನ್ನು ವಿವರಿಸಿದರು. ಶಿರೂರಿನಲ್ಲಿ ವಿಶ್ವದರ್ಜೆಯ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಲು ಮುತುವರ್ಜಿ ವಹಿಸಿದ್ದಕ್ಕಾಗಿ ಶಾಲಾಡಳಿತ ಹಾಗೂ ಅದರ ಮ್ಯಾನೇಜಿಂಗ್ ಟ್ರಸ್ಟಿ ಸೈಯದ್ ಅಬ್ದುಲ್ ಖಾದರ್ ಬಾಶು ಅವರನ್ನು ಈ ಸಂದರ್ಭದಲ್ಲಿ ಪ್ರಶಂಸಿಸಿದರು.
ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಆಶೋತ್ತರಗಳಿಗೆ ಸ್ಪಂದಿಸಬೇಕು ಹಾಗೂ ಅವರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಎಂದರು.
ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಅಬ್ದುಸ್ಸಲಾಂ ಪುತ್ತಿಗೆ ಹಾಗೂ ಅಬ್ದುಲ್ ರವೂಫ್ ಪುತ್ತಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಗ್ರೀನ್‌ವ್ಯಾಲಿ ಶಾಲೆ ಹಾಗೂ ಪಿಯುಕಾಲೇಜ್‌ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ ಖಾದರ್ ಬಾಶು ವಿಶೇಷ ಪ್ರಶಸ್ತಿಗಳನ್ನು ವಿತರಿಸಿದರು ಹಾಗೂ ಮ್ಯಾಥ್ಯೂ ಸಿ.ನಿನಾನ್ ಸಮಗ್ರ ಪ್ರಶಸ್ತಿಗಳನ್ನು ವಿತರಿಸಿದರು.
ದ್ವಿತೀಯ ಪಿಯು ವಿದ್ಯಾರ್ಥಿ ಮುಹಮ್ಮದ್ ಸುಹೈಲ್, ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿ ತನ್ನ 14 ವರ್ಷಗಳ ಅನುಭವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವರ್ಣರಂಜಿತ ನೃತ್ಯ, ನಾಟಕ ಇತ್ಯಾದಿ ಕಲಾ ಪ್ರದರ್ಶನಗಳನ್ನು ನೀಡಿದರು.
ವಿದ್ಯಾರ್ಥಿನಿ ಪೂಜಾ ಸ್ವಾಗತಿಸಿದರು, ನಿಧಿ ನಾಯಕ್ ವಂದಿಸಿದರು.







