ವೈಜ್ಞಾನಿಕ ಅಧ್ಯಯನ ನಡೆಸದೆ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ: ಶೋಭಾ ಕರಂದ್ಲಾಜೆ

ಪುತ್ತೂರು , ಜ.7 : ರಾಜ್ಯ ಸರಕಾರ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಯೋಜನೆಯ ಕುರಿತ ಕಾಂಗ್ರೆಸ್ ನಿಲುವು ಕಮಿಷನ್ ಪಡೆದ ನಿಲುವು. ಯೋಜನೆಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹಣದ ರೂಪದ ಪ್ರಸಾದ ಪಡೆದಿದ್ದಾರೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ತನ್ನ ಹುಟ್ಟೂರಾದ ಪುತ್ತೂರು ತಾಲೂಕಿನ ಚಾರ್ವಾಕದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಎತ್ತಿನಹೊಳೆ ಯೋಜನೆಗಾಗಿ ಅಣೆಕಟ್ಟು ನಿರ್ಮಾಣ ಎಲ್ಲಿ ಮಾಡಲಾಗುತ್ತಿದೆ. ಯೋಜನೆಯಲ್ಲಿ ಹೇಳಿರುವಷ್ಟು ನೀರು ಎಲ್ಲಿಂದ ತರಲಾಗುತ್ತಿದೆ ಎಂಬುದು ಗೊಂದಲಮಯವಾಗಿದ್ದು, ಒಬ್ಬೊಬ್ಬರು ಒಂದೊಂದು ಅಧ್ಯಯನ ವರದಿ ನೀಡಿ ಜನರನ್ನು ಗೊಂದಲಕ್ಕೆ ಸಿಲುಕಿಸಲಾಗಿದೆ. ಯೋಜನೆಯ ನಿಜವಾದ ಪ್ರಯೋಜನದ ಕುರಿತು ಜನರಿಗೆ ತಿಳಿಸಿ ಗೊಂದಲಕ್ಕೆ ಸರಕಾರ ಪೂರ್ಣ ವಿರಾಮ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿಲುವಿನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬರ ಪರಿಶೀಲನೆ ಭೇಟಿ ಸಂದರ್ಭ ಬರ ಪೀಡಿತ ಕೋಲಾರದ ಜನರಿಗೆ ನೀರು ಕೊಡಬೇಕು ಎಂಬುದನ್ನು ಯಡಿಯೂರಪ್ಪ ಅವರು ಹೇಳಿದ್ದಾರೆ ಹೊರತು ಎಲ್ಲಿಂದ ನೀರು ತರಬೇಕು ಎಂಬುದನ್ನಲ್ಲ ಎಂದರು.
ಹೇಮಾವತಿ ನದಿಮೂಲ ಬಳಸಿಕೊಳ್ಳಲಿ:
ಕೋಲಾರ, ಚಿಕ್ಕಬಳ್ಳಾಪುರ ಕಡೆಗಳಿಗೆ ನೀರು ನೀಡಲು ಹೇಮಾವತಿ ನದಿ ಮೂಲವನ್ನು ಸರಕಾರ ಬಳಸಿಕೊಳ್ಳಲಿ ಎಂದು ಹೇಳಿದರು. ದ.ಕ. ಜಿಲ್ಲೆಯಲ್ಲೂ ಬರದ ಸ್ಥಿತಿ ಇದೆ. ಕಳೆದ ವರ್ಷ ಮಂಗಳೂರು ನಗರಕ್ಕೇ ನೀರು ಇರಲಿಲ್ಲ. ಈ ವರ್ಷ ಕೂಡ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಇಲ್ಲ:
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಅವಮಾನವಾಗುವ ಹಲವು ಪ್ರಕರಣಗಳು ನಡೆಯುತ್ತಿವೆ. ಎ. 31 ರಂದು ಬೆಂಗಳೂರಿನಲ್ಲಿ ನಡೆದ ಘಟನೆ ರಾಜ್ಯಕ್ಕೆ ಕಪ್ಪುಚುಕ್ಕೆ ತಂದಿದೆ. ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಸರಕಾರ ಪೊಲೀಸ್ ಬೀಟಿಂಗ್ ಜಾಸ್ತಿ ಮಾಡಿಲ್ಲ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಪೊಲೀಸ್ ಇಲಾಖೆ ಅಳವಡಿಸಿದ ಸಿಸಿ ಕ್ಯಾಮರಾ ಫೂಟೇಜ್ ಪ್ರಯೋಜನಕ್ಕೆ ಸಿಗುತ್ತಿಲ್ಲ. ಇಲಾಖೆಯ ಸಿಸಿ ಕ್ಯಾಮರಾ ಲೈಬ್ರೇರಿಯಲ್ಲಿ ಇಡಲು ಮಾತ್ರ ಸೂಕ್ತವಾಗಿದೆ ಎಂದು ಲೇವಡಿ ಮಾಡಿದರು.
ಅಭಿವೃದ್ಧಿಗೆ ಮಾರಕ:
ಪೊಲೀಸ್ ಅಕಾರಿಗಳನ್ನು ಸರಕಾರ ತಮಗೆ ಇಷ್ಟ ಬಂದಂತೆ ವರ್ಗಾವಣೆ ಮಾಡುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ ದುರ್ಬಲ ಅಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದರಿಂದ ರಾಜ್ಯಕ್ಕೆ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಿದೆ, ರಾಜ್ಯದ ಅಭಿವೃದ್ಧಿಗೂ ಮಾರಕವಾಗುತ್ತಿದೆ ಎಂದರು.
ರಾಜ್ಯದ ಮಂತ್ರಿಗಳು ಜನರ ಕಷ್ಟವನ್ನು ಅರಿತುಕೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಸವನ್ನೂ ಮಾಡುತ್ತಿಲ್ಲ. ಬಜೆಟ್‌ನಲ್ಲಿ ಬರ ಪರಿಹಾರಕ್ಕೆ ಕೊಟ್ಟ ಹಣ ಎಷ್ಟು ಎಂಬುದನ್ನು ಸರಕಾರ ತಿಳಿಸಬೇಕು. ಹಣದ ಆಸೆಯಲ್ಲಿ ಆಡಳಿತ ನಡೆಸುವ ಭ್ರಮೆಯನ್ನು ಸಿದ್ಧರಾಮಯ್ಯ ಸರಕಾರ ಬಿಡಬೇಕು ಎಂದು ಶೋಭಾ ಆಗ್ರಹಿಸಿದರು.
ದೇವಸ್ಥಾನಗಳ ನೇಮಕ : ರಾಜಕೀಯ ಸಲ್ಲದು
ರಾಜ್ಯದಲ್ಲಿ ಒಂದೊಂದು ಸರಕಾರ ಬಂದಾಗ ಧಾರ್ಮಿಕ ಪರಿಷತ್, ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ಬದಲಾಗುತ್ತದೆ. ದೇವಸ್ಥಾನಗಳ ಸಮಿತಿಯಲ್ಲಿ ರಾಜಕೀಯ ಬರಬಾರದು, ಪಕ್ಷದ ಆಧಾರದಲ್ಲಿ ಕಮಿಟಿ ರಚನೆಯಾಗಬಾರದು ಎಂದು ಅಭಿಪ್ರಾಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ಸಮಾಜಸೇವೆ, ಶಾಲೆ, ದೇವಸ್ಥಾನಗಳಲ್ಲಿ ಸರಕಾರ ರಾಜಕೀಯ ತರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸರಕಾರ ಬಂದಾಗ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







