ಮಿಸ್ಬಾವುಲ್ ಹಕ್ ನಿವೃತ್ತಿಗೆ ಪಾಕ್‌ನ ಮಾಜಿ ಆಟಗಾರರ ಆಗ್ರಹ

ಕರಾಚಿ, ಜ.7: ಪಾಕಿಸ್ತಾನ ತಂಡ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ವೈಟ್‌ವಾಶ್ ಅನುಭವಿಸಿರುವುದಕ್ಕೆ ಕಳಪೆ ಬ್ಯಾಟಿಂಗ್ ಹಾಗೂ ಸ್ಫೂರ್ತಿರಹಿತ ನಾಯಕತ್ವವೇ ಕಾರಣ ಎಂದು ದೂಷಿಸಿರುವ ಪಾಕ್‌ನ ಮಾಜಿ ಕ್ರಿಕೆಟ್ ಆಟಗಾರರು ನಾಯಕ ಮಿಸ್ಬಾವುಲ್ ಹಕ್ ನಿವೃತ್ತಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಅತ್ಯಂತ ಹಿರಿಯ ಕ್ರಿಕೆಟಿಗನಾಗಿರುವ 42ರ ಪ್ರಾಯದ ಮಿಸ್ಬಾವುಲ್ ಹಕ್ ನೇತೃತ್ವದ ಪಾಕಿಸ್ತಾನ ತಂಡ ಶನಿವಾರ ಸಿಡ್ನಿಯಲ್ಲಿ ಕೊನೆಗೊಂಡ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 220 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲುವುದರೊಂದಿಗೆ 0-3 ಅಂತರದಿಂದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು.
ಪಾಕಿಸ್ತಾನ ತಂಡ 1999ರ ಬಳಿಕ ಸತತ ನಾಲ್ಕನೆ ಬಾರಿ ಆಸ್ಟ್ರೇಲಿಯದಲ್ಲಿ 3-0 ಅಂತರದಿಂದ ವೈಟ್‌ವಾಶ್ ಅನುಭವಿಸಿದೆ.
ನಿವೃತ್ತಿಯ ಬಗ್ಗೆ ನಿರ್ಧರಿಸಲು ಇನ್ನಷ್ಟು ಸಮಯದ ಅಗತ್ಯವಿದೆ ಎಂದು ಆಸ್ಟ್ರೇಲಿಯ ವಿರುದ್ಧ ಸರಣಿ ಸೋತ ಬಳಿಕ ಮಿಸ್ಬಾವುಲ್ ಹಕ್ ಪ್ರತಿಕ್ರಿಯಿಸಿದ್ದರು. ಈ ಮೂಲಕ ಕಳೆದ ವಾರ ನೀಡಿದ್ದ ತನ್ನ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. 2ನೆ ಟೆಸ್ಟ್ ಮುಗಿದ ಬಳಿಕ ಮಿಸ್ಬಾವುಲ್ ಹಕ್ ಅವರು ತಾನು ಆದಷ್ಟು ಬೇಗನೆ ನಿವೃತ್ತಿಯಾಗುವೆ. ಮೂರನೆ ಟೆಸ್ಟ್‌ನಲ್ಲಿ ಆಡುವುದು ಸಂಶಯ ಎಂದು ಹೇಳಿದ್ದರು.
2010ರಲ್ಲಿ ಪಾಕಿಸ್ತಾನ ತಂಡ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಸಂಕಷ್ಟ ಸಮಯದಲ್ಲಿ ಪಾಕ್‌ನ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಮಿಸ್ಬಾ 53 ಟೆಸ್ಟ್ ಪಂದ್ಯಗಳಲ್ಲಿ 24ರಲ್ಲಿ ಗೆಲುವು, 18ರಲ್ಲಿ ಸೋಲು ಹಾಗೂ 11 ಪಂದ್ಯಗಳಲಿ ಡ್ರಾ ಸಾಧಿಸಿದ್ದರು.
ಮಿಸ್ಬಾಗೆ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಪ್ರತಿಯೊಬ್ಬ ಕ್ರೀಡಾಪಟು ಇಂತಹ ಸಮಯ ಎದುರಿಸುತ್ತಾನೆ. ಮಿಸ್ಬಾಗೆ ಸಾಕಷ್ಟು ಅವಕಾಶ ನೀಡಲಾಗಿದ್ದು, ಅವರು ಇದೀಗ ನಿವೃತ್ತಿ ಘೋಷಿಸುವುದು ಉತ್ತಮ. ನನ್ನ ಪ್ರಕಾರ ನಾಯಕನಾದವ ಐದು ವರ್ಷಗಳ ಉತ್ತಮ ನಿರ್ವಹಣೆ ನೀಡಲು ಸಾಧ್ಯ. ಆ ನಂತರ ಅವರ ನಿರ್ವಹಣೆ ಕಡಿಮೆಯಾಗುತ್ತದೆ ಎಂದು ಮಾಜಿ ನಾಯಕ, ವೀಕ್ಷಕವಿವರಣೆಗಾರ ರಮೀಝ್ ರಾಜಾ ಹೇಳಿದ್ದಾರೆ.
ಆಸೀಸ್ ವಿರುದ್ಧದ ಸರಣಿಯಲ್ಲಿ ಮಿಸ್ಬಾವುಲ್ ಹಕ್ ಅವರ ನಾಯಕತ್ವ ಅತ್ಯಂತ ಕಳಪೆಯಾಗಿತ್ತು. ಬೌಲಿಂಗ್ ಹಾಗೂ ಫೀಲ್ಡಿಂಗ್ ನಿಯೋಜನೆಯಲ್ಲಿ ಎಡವಿದ್ದಾರೆ. ಒಟ್ಟಾರೆ ತಂಡದ ಮೇಲೆ ಪ್ರಭಾವ ಬೀರಲು ವಿಫಲರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಸಿಇಒ ರಾಜಾ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಟ್ರಂಪ್‌ಕಾರ್ಡ್ ಲೆಗ್-ಸ್ಪಿನ್ನರ್ ಯಾಸಿರ್ ಶಾ ಸರಣಿಯಲ್ಲಿ ಕೇವಲ 8 ವಿಕೆಟ್‌ಗಳನ್ನು ಪಡೆದಿದ್ದು, 672 ರನ್ ಬಿಟ್ಟುಕೊಟ್ಟಿದ್ದರು. ಇದು ಬೌಲರ್‌ವೊಬ್ಬ ಮೂರು ಪಂದ್ಯಗಳ ಸರಣಿಯಲ್ಲಿ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟ ಗರಿಷ್ಠ ರನ್ ಆಗಿದೆ.
ರಮೀಝ್ ರಾಜಾ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ ಮಾಜಿ ವೇಗದ ಬೌಲರ್ ವಸಿಂ ಅಕ್ರಂ,‘‘ಒಂದು ವೇಳೆ ನಾನು ಮಿಸ್ಬಾವುಲ್‌ಹಕ್‌ರ ಸ್ಥಾನದಲ್ಲಿರುತ್ತಿದ್ದರೆ ನಿವೃತ್ತಿಯಾಗುತ್ತಿದ್ದೆ. ನನ್ನ ನಾಯಕತ್ವದಲ್ಲಿ ಪಾಕ್ ತಂಡ 1999ರಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಾಗ ನಾನು ನಾಯಕ ಸ್ಥಾನ ತ್ಯಜಿಸಿದ್ದೆ. ಆ ಸರಣಿಯಲ್ಲಿ ನಾವು ಮೊದಲೆರಡು ಪಂದ್ಯಗಳಲ್ಲಿ ಕಠಿಣ ಹೋರಾಟ ನೀಡಿದ್ದೆವು ಎಂದು ಹೇಳಿದರು.
ಮೂರನೆ ಟೆಸ್ಟ್‌ಗೆ ಮೊದಲು ಯೂನಿಸ್ ಖಾನ್ ನಿವೃತ್ತಿಯಾಗಬೇಕೆೆಂದು ನಾನು ಅಭಿಪ್ರಾಯಪಟ್ಟಿದ್ದೆ. ಆದರೆ, ಪಾಕಿಸ್ತಾನದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಆಗಿರುವ ಯೂನಿಸ್ 3ನೆ ಟೆಸ್ಟ್‌ನಲ್ಲಿ ಅಜೇಯ 175 ರನ್ ಗಳಿಸಿ ಇನ್ನಷ್ಟು ಸಮಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಸಾಮರ್ಥ್ಯವಿದೆ ಎಂದು ಸಾಬೀತು ಪಡಿಸಿದ್ದಾರೆ ಎಂದು ಅಕ್ರಂ ಅಭಿಪ್ರಾಯಪಟ್ಟರು.







