ಶಾಲಾ ಶುಲ್ಕ ಪಾವತಿಸಲಾಗದೆ ಅವಮಾನಿತ ಬಾಲಕನ ಆತ್ಮಹತ್ಯೆ: ಪ್ರಾಂಶುಪಾಲ ಸೆರೆ
ಹೈದರಾಬಾದ್,ಜ.7: ಇಲ್ಲಿಯ ಹಫೀಝಬಾಬಾ ನಗರದ ಇಫಾಮ್ ಟ್ಯಾಲೆಂಟ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿ ಮಿರ್ಜಾ ಸಲ್ಮಾನ್ ಬೇಗ್(16) ಬುಧವಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಪ್ರಾಂಶುಪಾಲ ಖಾಜಾ ಝೈನುಲ್ಲಾಬೆದಿನ್ ಅವರನ್ನು ಕಂಚನಬಾಗ್ ಪೊಲೀಸರು ಬಂಧಿಸಿದ್ದಾರೆ. ಶಾಲಾ ಶುಲ್ಕವನ್ನು ಪಾವತಿಸದಿದ್ದಕ್ಕಾಗಿ ಆಡಳಿತ ಮಂಡಳಿಯು ಅವಮಾನಿಸಿದ್ದರಿಂದ ನೊಂದುಕೊಂಡ ಸಲ್ಮಾನ್ ಈ ಕೃತ್ಯವನ್ನೆಸಗಿದ್ದಾನೆ.
ಪ್ರಾಂಶುಪಾಲರು ನನ್ನ ತಮ್ಮನ ಪ್ಯಾಂಟ್‌ನ್ನು ಜಾರಿಸಿ ಆತನನ್ನು ಥಳಿಸಿದ್ದರು. ಶುಲ್ಕವನ್ನು ತುಂಬುವಂತೆ 3-4 ದಿನಗಳಿಂದಲೂ ಶಾಲಾಡಳಿತವು ಆತನಿಗೆ ಬೆದರಿಕೆ ಒಡ್ಡುತ್ತಲೇ ಇತ್ತು ಎಂದು ಸಲ್ಮಾನ್‌ನ ಅಣ್ಣ ಬಶೀರ್ ಸುದ್ದಿಗಾರರಿಗೆ ತಿಳಿಸಿದರು.
ನೋಟು ರದ್ದತಿಯ ಬಳಿಕ ನಗದು ಕೊರತೆಯಿಂದಾಗಿ ಗಡುವಿನೊಳಗೆ ಶಾಲಾ ಶುಲ್ಕವನ್ನು ಪಾವತಿಸಲು ತಮಗೆ ಸಾಧ್ಯವಾಗಿರಲಿಲ್ಲ, ಆದರೂ ಅದಕ್ಕಾಗಿ ಬಹುವಾಗಿ ಪ್ರಯತ್ನಿಸುತ್ತಲೇ ಇದ್ದೆವು ಎಂದು ಸಲ್ಮಾನ್‌ನ ಹೆತ್ತವರು ತಿಳಿಸಿದರು. ಆದರೆ ಇಂತಹ ಘಟನೆಯನ್ನು ನಿರಾಕರಿಸಿರುವ ಶಾಲಾಡಳಿತವು, ಸಲ್ಮಾನ್ ಹುಡುಗಿಯೋರ್ವಳನ್ನು ಪ್ರೇಮಿಸುತ್ತಿದ್ದ ಮತ್ತು ಪ್ರೇಮ ವ್ಯವಹಾರದಲ್ಲಿಯ ಸಮಸ್ಯೆ ಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದೆ.
ಸಲ್ಮಾನ್‌ನ ಹೆತ್ತವರ ದೂರಿನ ಮೇರೆಗೆ ಆತ್ಮಹತ್ಯೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿ ಲಾಕಪ್‌ಗೆ ತಳ್ಳಿದ್ದಾರೆ.





