10 ರೂ.ಲಂಚ ಪ್ರಕರಣದಲ್ಲಿ 22 ವರ್ಷಗಳ ಬಳಿಕ ಐವರು ಪೊಲೀಸರ ಖುಲಾಸೆ...!
ಅಹ್ಮದಾಬಾದ್,ಜ.7: 10 ರೂ.ಲಂಚವನ್ನು ಪಡೆದಿದ್ದ ಪ್ರಕರಣದಲ್ಲಿ ಆರೊಪಿಗಳಾಗಿದ್ದ ನಗರದ ಸಂಚಾರ ವಿಭಾಗದ ಐವರು ಪೊಲೀಸರು 22 ವರ್ಷಗಳ ಕಾನೂನು ಹೋರಾಟದ ಬಳಿಕ ಕೊನೆಗೂ ಖುಲಾಸೆಗೊಂಡಿದ್ದಾರೆ. 1994, ಜೂನ್‌ನಲ್ಲಿ ನಗರದ ರಾಣಿಪ್ ಎಂಬಲ್ಲಿ 10 ರೂ. ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಈ ಐವರು ಪೊಲೀಸರನ್ನು ಬಂಧಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಅವರನ್ನು ದೋಷಿಗಳು ಎಂದು ಘೋಷಿಸಿ ಅವರಿಗೆ ತಲಾ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಅವರನ್ನು ದೋಷಮುಕ್ತಗೊಳಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಎಸಿಬಿಯು ಆರೋಪವನ್ನು ರುಜುವಾತು ಗೊಳಿಸುವಲ್ಲಿ ವಿಫಲಗೊಂಡಿದೆ ಮತ್ತು ಸಾಕ್ಷಿಗಳು ಕೂಡ ಆರೋಪಿಗಳನ್ನು ಗುರುತಿಸುವಲ್ಲಿ ಗೊಂದಲಕ್ಕೊಳಗಾಗಿದ್ದರು ಎಂದು ಹೇಳಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಂದ ಸಂಚಾರ ಪೊಲೀಸರು ಲಂಚ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಎಸಿಬಿಗೆ ಲಭ್ಯವಾಗಿತ್ತು. ಎಸಿಬಿ ಇನ್‌ಸ್ಪೆಕ್ಟರ್ ಕೆ.ಎಂ.ರಾಠೋಡ್ ಅವರು ಈ ಗುಪ್ತಚರ ಮಾಹಿತಿಯನ್ನು ಸ್ಟೇಷನ್ ಡೈರಿಯಲ್ಲಿ ನಮೂದಿಸದೆ ಸಿಬ್ಬಂದಿಗಳೊಂದಿಗೆ ದಾಳಿಗೆ ತೆರಳಿದ್ದರು. ಪೊಲೀಸರನ್ನು ಬಲೆಗೆ ಬೀಳಿಸಲು ರಿಕ್ಷಾ ಚಾಲಕನೋರ್ವನ್ನು ಬಳಸಿಕೊಂಡಿದ್ದರು. ಈತನಿಂದ ಹತ್ತು ರೂ.ಲಂಚ ಪಡೆಯುತ್ತಿದ್ದಾಗ ಐವರು ಪೊಲೀಸರನ್ನು ಬಂಧಿಸಿ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.ವಿಚಾರಣಾ ನ್ಯಾಯಾಲಯವು ತಮಗೆ ಶಿಕ್ಷೆ ವಿಧಿಸಿದ ಬಳಿಕ ಆರೋಪಿಗಳು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಆರೋಪಿ ಪೊಲೀಸರಿಗೆ ಶೇ.75ರಷ್ಟು ವೇತನವನ್ನು ಮಾತ್ರ ಪಾವತಿಸಲಾಗುತ್ತಿತ್ತು. ಅಲ್ಲದೆ ಒಂದಿಬ್ಬರು ಸೇವೆಯಿಂದ ನಿವೃತ್ತರಾಗಿದ್ದು, ಅವರಿಗೂ ಪಿಂಚಣಿಯಲ್ಲಿ ಶೇ.25ರಷ್ಟು ಮೊತ್ತ ಕಡಿತವಾಗುತ್ತಿತ್ತು. ಇದೀಗ ಖುಲಾಸೆಗೊಂಡಿರುವ ಈ ಪೊಲೀಸರು ಈವರೆಗೆ ಕಡಿತಗೊಂಡಿದ್ದ ಶೇ.25ರಷ್ಟು ಮೊತ್ತವನ್ನು ಪಡೆಯಲಿದ್ದಾರೆ.







