ಚಿಟ್‌ಫಂಡ್ ಹಗರಣದಲ್ಲಿ ಬಂಧಿತ ಟಿಎಂಸಿ ಶಾಸಕ ಪಾಲ್ ಜೈಲಿಗೆ ರವಾನೆ
ಭುವನೇಶ್ವರ,ಜ.7: ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣದಲ್ಲಿ ಪ.ಬಂಗಾಲದ ಟಿಎಂಸಿ ಸಂಸದ ತಪಸ್ ಪಾಲ್ ಅವರನ್ನು ಬಂಧಿಸಿದ ಸಿಬಿಐ, ಪಕ್ಷದ ಇನ್ನೋರ್ವ ಸಂಸದ ಸುದೀಪ್ ಬಂಡೋಪಾಧ್ಯಾಯ ಜೊತೆ ಜಂಟಿ ವಿಚಾರಣೆಗೊಳಪಡಿಸಿದ ಬಳಿಕ ಶುಕ್ರವಾರ ಜೈಲಿಗೆ ರವಾನಿಸಲಾಗಿದೆ.
ಡಿ.30ರಂದು ಕೋಲ್ಕತಾದಲ್ಲಿ ಬಂಧಿಸಲ್ಪಟ್ಟಿದ್ದ ಪಾಲ್‌ರನ್ನು ಮರುದಿನ ಒಡಿಶಾಕ್ಕೆ ಕರೆ ತರಲಾಗಿತ್ತು. ಆರು ದಿನಗಳ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಅವರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತು ಆದೇಶವನ್ನು ಕಾಯ್ದಿರಿಸಿದ ನ್ಯಾಯಾಧೀಶರು ಜ.19ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ಇಲ್ಲಿಯ ಝಾರ್ಪಾಡಾ ಜೈಲಿಗೆ ರವಾನಿಸಿದರು.
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಬಂಡೋ ಪಾಧ್ಯಾಯರನ್ನು ಜ.3ರಂದು ಸಿಬಿಐ ಬಂಧಿಸಿದೆ. ರೋಸ್ ವ್ಯಾಲಿ ಚಿಟ್‌ಫಂಡ್ ನಾಲ್ಕು ರಾಜ್ಯಗಳಲ್ಲಿ ಹೂಡಿಕೆ ದಾರರಿಗೆ 17,000 ಕೋ.ರೂ.ಗಳನ್ನು ವಂಚಿಸಿದೆ. ಒಡಿಶಾ ರಾಜ್ಯವೊಂದರಲ್ಲಿಯೇ ಹೂಡಿಕೆದಾರರು 450 ಕೋ.ರೂ.ಗಳನ್ನು ಕಳೆದುಕೊಂಡಿದ್ದಾರೆ.





