ಬಜೆಟ್ ಮಂಡನೆಗೆ ವಿಪಕ್ಷಗಳ ವಿರೋಧ
ಕೇಂದ್ರ ಸರಕಾರದ ಪ್ರತಿಕ್ರಿಯೆ ಕೇಳಿದ ಚುನಾವಣಾ ಆಯೋಗ
ಹೊಸದಿಲ್ಲಿ, ಜ.7: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಫೆ.1ರಂದು ಮಂಡಿಸಲು ಉದ್ದೇಶಿಸಿರುವ ಬಜೆಟ್ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಕಾರಣ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗವು ಕೇಂದ್ರ ಸರಕಾರಕ್ಕೆ ತಿಳಿಸಿದೆ. ಬಜೆಟ್ ಮಂಡನೆ ದಿನಾಂಕವನ್ನು ಫೆ.1ಕ್ಕೆ ಹಿಂದೂಡಲು ಕಾರಣವೇನು ಎಂದು ಜನವರಿ 10ರ ಒಳಗೆ ತಿಳಿಸುವಂತೆ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಸಚಿವ ಸಂಪುಟದ ಕಾರ್ಯದರ್ಶಿ ಪಿ.ಕೆ.ಸಿನ್ಹಾರಿಗೆ ಪತ್ರ ಬರೆದು ತಿಳಿಸಿದ್ದು, ಅವರು ಸಂಸದೀಯ ವ್ಯವಹಾರಗಳ ಸಚಿವರೊಂದಿಗೆ ಸಮಾಲೋಚಿಸಿದ ಬಳಿಕ ಉತ್ತರ ನೀಡುವ ನಿರೀಕ್ಷೆಯಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನದ ಅಂತಿಮ ಹಂತ ಮಾರ್ಚ್ 8ರಂದು ಕೊನೆಗೊಳ್ಳಲಿದ್ದು ಕನಿಷ್ಠ ಈ ಅವಧಿಯವರೆಗಾದರೂ ಬಜೆಟ್ ಮಂಡನೆಯನ್ನು ಮುಂದೂಡುವಂತೆ ವಿಪಕ್ಷಗಳು ಕೋರಿ ಸಲ್ಲಿಸಿದ್ದ ಪತ್ರವನ್ನು ಶುಕ್ರವಾರ ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು. ಕಾಂಗ್ರೆಸ್, ಟಿಎಂಸಿ, ಬಿಎಸ್ಪಿ, ಎಸ್ಪಿ ಮುಂತಾದ ವಿಪಕ್ಷಗಳು ಸೇರಿ ಈ ಕೋರಿಕೆ ಸಲ್ಲಿಸಿದ್ದವು. ಸಾಮಾನ್ಯವಾಗಿ ಫೆಬ್ರವರಿ ಮೂರನೆ ವಾರದಲ್ಲಿ ಆರಂಭವಾಗುವ ಬಜೆಟ್ ಅಧಿವೇಶನವನ್ನು ಬೇಗನೆ ನಡೆಸುವ ನಿರ್ಧಾರದಲ್ಲಿ ಅಸಮಂಜತೆ ಏನಿಲ್ಲ ಎಂದಿರುವ ಸರಕಾರವು ತನ್ನ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಬಜೆಟ್ ಅಧಿವೇಶನವನ್ನು ಜನವರಿ 31ರಂದು ಆರಂಭಿಸುವಂತೆ ಮತ್ತು ಫೆ.1ರಂದು ಬಜೆಟ್ ಮಂಡಿಸುವಂತೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಸಂಪುಟ ಸಮಿತಿಯು ಶಿಫಾರಸು ಮಾಡಿತ್ತು. ಇದರಿಂದ ಹೊಸ ಯೋಜನೆಗಳಲ್ಲಿ ಎಪ್ರಿಲ್ 1ರಿಂದ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಸಮಿತಿ ತಿಳಿಸಿತ್ತು. 2012ರಲ್ಲಿ ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭ ವಿಪಕ್ಷಗಳ ಆಕ್ಷೇಪವನ್ನು ಪರಿಗಣಿಸಿದ ಕಾಂಗ್ರೆಸ್, ಬಜೆಟ್ ಮಂಡನೆಯನ್ನು ಫೆಬ್ರವರಿ 28ರಿಂದ ಮಾರ್ಚ್ 16ಕ್ಕೆ ಮುಂದೂಡಿತ್ತು. ಇದೇ ರೀತಿ, ಚುನಾವಣೆ ಮುಗಿಯುವ ವರೆಗೆ ಬಜೆಟ್ ಮಂಡಿಸಬಾರದು ಎಂಬುದು ನಮ್ಮ ಆಶಯವಾಗಿದೆ ಎಂದು ರಾಜ್ಯಸಭೆಯಲ್ಲಿ ವಿಪಕ್ಷದ ಮುಖಂಡ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಬಳಿಕ ಹೇಳಿಕೆ ನೀಡಿದ್ದರು. ಫೆ.1ರಂದು ಬಜೆಟ್ ಮಂಡಿಸಲು ಅವಕಾಶ ಮಾಡಿಕೊಟ್ಟರೆ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಮತ್ತು ಇದರಿಂದ ಬಿಜೆಪಿಗೆ ನೆರವಾಗಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ. ನೋಟು ಅಮಾನ್ಯ ನಿರ್ಧಾರ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳುತ್ತಿರುವ ವಿಪಕ್ಷಗಳು, ಫೆ.1ರಂದು ಬಜೆಟ್ ಮಂಡಿಸುವುದನ್ನು ವಿರೋಧಿಸುವುದರಲ್ಲಿ ಅರ್ಥ ಇಲ್ಲ ಎಂದು ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿ ಕೇಂದ್ರ ಸರಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಜನವರಿ 31ರಂದು ಬಜೆಟ್ ಅಧಿವೇಶನ ಆರಂಭಿಸುವ ಸರಕಾರದ ನಿರ್ಧಾರವನ್ನು ವಿರೋಧಿಸಿ 16 ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.





