ಕನ್ನಡ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆ ಅನನ್ಯ: ಪ್ರೊ.ಸಿದ್ದರಾಮಯ್ಯ
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಗುರುಪುರ, ಜ.7:(ಮಂದಾರ ಕೇಶವ ಭಟ್ ವೇದಿಕೆ): ಕರಾವಳಿ ಕರ್ನಾಟಕ ಕನ್ನಡ ಸಾಹಿತ್ಯಕ್ಕೆ ಅಮೋಘವಾದ ಸಲನ್ನು ಕೊಟ್ಟಿದ್ದು, ನವೋದಯ ಸಾಹಿತ್ಯದಲ್ಲಿ ಹೆಚ್ಚು ಗುರುತಿಸಿಕೊಂಡಿದೆ. ಕರಾವಳಿ ನೆಲದ ಸೊಗಡು, ಭಾಷೆಯ ವೈಶಿಷ್ಟ ವಿಭಿನ್ನತೆಯಿಂದ ಕೂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಗುರುಪುರದ ಕುಕ್ಕುದಕಟ್ಟೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಜಂಟಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿಯ ಭಾಗವು ಮಾತೃಪ್ರಧಾನ ವ್ಯವಸ್ಥೆಯನ್ನು ಹೊಂದಿರುವ ನೆಲವಾಗಿದೆ. ಬುಡಕಟ್ಟು ಮೂಲಗಳಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಹೆಚ್ಚು ವ್ಯಾಪಿಸಿದ್ದು, ನಿಸರ್ಗಕ್ಕೆ ಎರವಾಗದಂತೆ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಆದರ್ಶಗಳು ಸರಳವಾಗಿದ್ದಾಗ ಬದುಕು ಸುಂದರವಾಗಿರಲು ಸಾಧ್ಯ. ವಿಚಾರಗಳನ್ನು ಬಾಳಿನಲ್ಲಿ ಆಚಾರವಾಗಿ ತರುವವನೇ ಅರಸು. ಸಾಮ್ರಾಜ್ಯ ಕಟ್ಟುವ ರಾಜನಿಗಿಂತ ನೀತಿಗೆ ಪ್ರಭುವಾಗಬೇಕು ಎಂದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಮಕ್ಕಳ ಮುಗ್ಧತೆಯಿಂದ ಸಂಸ್ಕೃತಿ ಬೆಳವಣಿಗೆ ಸಾಧ್ಯ. ಬಹುಸಂಸ್ಕೃತಿಯ ಜೊತೆಗೆ ಲಿಂಗ ತಾರತಮ್ಯವನ್ನು ತ್ಯಜಿಸಬೇಕು. ಸಮಾರಂಭಗಳು ಪುರುಷ ಪ್ರಧಾನವಾಗದೆ ಸೀಯರಿಗೂ ಅವಕಾಶವನ್ನು ನೀಡಬೇಕೆಂದರು.
ಪ್ರಸ್ತುತ ಜೀವನ ವೌಲ್ಯ ಕುಸಿಯುತ್ತಿದ್ದು, ವರ್ಷಾಚರಣೆಯ ಸಂದರ್ಭ ಮನುಷ್ಯರು ಮೃಗಗಳಂತೆ ವರ್ತಿಸುತ್ತಿದ್ದಾರೆ. ಇವರ್ಯಾರೂ ಹಳ್ಳಿಗರಲ್ಲ. ಹಳ್ಳಿಗಳಲ್ಲಿ ಜಾತ್ರೆ, ಉತ್ಸವಗಳು ಜರಗುತ್ತವೆ. ಲಕ್ಷಾಂತರ ಜನ ಸೇರುತ್ತಾರೆ. ಅಲ್ಲಿ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ. ಜಾತ್ರೆಗಳು ಸಮಷ್ಠಿ-ಸಂಭ್ರಮವನ್ನು ಆಚರಿಸುವ ಸಮಾವೇಶಗಳಾಗಿವೆ ಎಂದರು.
ಇಂದು ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಬದುಕನ್ನು ಉನ್ನತ ಸ್ಥಾನಕ್ಕೆ ಏರಿಸುವ ಮಹತ್ತರವಾದ ಕಾರ್ಯವಾಗುವ ಅಗತ್ಯವಿದೆ. ಸಮ್ಮೇಳನಗಳಲ್ಲಿ ಕೇವಲ ಸಾಹಿತ್ಯದ ಕುರಿತು ವಿಚಾರಗೋಷ್ಠಿಗಳು ನಡೆಯುತ್ತಿವೆ. ಕೃಷಿ, ವಾಣಿಜ್ಯ, ಆಚಾರ-ವಿಚಾರ, ಸಾಮಾಜಿಕ, ಆರ್ಥಿಕ ಸಮಸ್ಯೆ, ಸವಾಲುಗಳನ್ನು ಕುರಿತು ಚರ್ಚೆಗಳ್ನು ನಡೆಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ನ ಮೇಲಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ವಸಂತಕುಮಾರ ಪೆರ್ಲ, ಶಾಸಕ ಮೊಯ್ದಿನ್ ಬಾವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ ಮೆರವಣಿಗೆಯನ್ನು ಉದ್ಘಾಟಿಸಿದರು. ‘ಇಬ್ಬನಿ’ ಮಕ್ಕಳ ಕವನ ಸಂಕಲನ ಪುಸ್ತಕವನ್ನು ಪ್ರಾಂಶುಪಾಲ ವಾಸುದೇವ್ ಕಾಮತ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತಾಪಂ ಸದಸ್ಯ ಸಚಿನ್ ಕುಮಾರ್, ಗುರುಪುರ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಸ್ವಾಗತಿಸಿದರು. ದೇವಕಿ ಅಚ್ಯುತ್ ವಂದಿಸಿದರು. ಡಾ. ಪದ್ಮನಾಭ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಭಾಷಾ ಸಂಬಂಧ ಬೆಸೆಯುವ ಇಚ್ಛಾಶಕ್ತಿ ಉದಯಿಸಲಿ: ಚಂದ್ರಕಲಾ ನಂದಾವರ
ಭವಿಷ್ಯದಲ್ಲಿ ನಾವು ನೆಮ್ಮದಿಯನ್ನು ಕಾಣಬೇಕಾದರೆ ನಮಗೆ ಭಾಷಾ ಸಂಬಂಧವನ್ನು ಬೆಸೆದುಕೊಳ್ಳಬೇಕೆನ್ನುವ ಇಚ್ಛಾಶಕ್ತಿ ಅಗತ್ಯ. ಭಾಷೆ ಎನ್ನುವುದು ಸಂಬಂಧಗಳೇ ಹೊರತು ಬಂಧನವಾಗಲಾರದು. ಇಂದು ಹೊರನಾಡುಗಳಲ್ಲಿ ಜಾತಿ, ಮತ, ಧರ್ಮಗಳನ್ನು ಮೀರಿ ಭಾಷಾ ಕುಟುಂಬಗಳು ಹುಟ್ಟಿಕೊಳ್ಳುವುದು, ಬದುಕಿನಲ್ಲಿ ಬಾಳಿಗಿರುವ ಮಹತ್ವವನ್ನು ತಿಳಿಸುತ್ತದೆ ಎಂದು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಚಂದ್ರಕಲಾ ನಂದಾವರ ಅಭಿಪ್ರಾಯಪಟ್ಟರು.
ಗುರುಪುರ ಕುಕ್ಕುದಕಟ್ಟೆಯಲ್ಲಿ ದ.ಕ. ಜಿಲ್ಲಾ ಕಸಾಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಗಳು ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಭಾಷೆ ನಮ್ಮನ್ನು ಬಾವಿಯೊಳಗಿನ ಕಪ್ಪೆಯನ್ನಾಗಿಸಲೂಬಹುದು. ಅದೇ ಭಾಷೆ ಪ್ರಪಂಚವನ್ನು ಸುತ್ತಾಡುವಂತೆಯೂ ಮಾಡಬಹುದು. ಅದು ಇಂದಿನ ವರ್ತಮಾನ. ಭಾಷೆಯ ಈ ಶಕ್ತಿಯನ್ನು ಅರಿತು ವಿವೇಚನೆಯಿಂದ ಬಳಸಿಕೊಳ್ಳಬೇಕಾದ ಜಾಣ್ಮೆ ನಮ್ಮದಾಗಬೇಕು. ಕನ್ನಡ ಭಾಷೆಯಲ್ಲಿರುವ ಪ್ರಾದೇಶಿಕ, ಜಾತೀಯ ವೈವಿಧ್ಯಗಳನ್ನು ಗ್ರಾಂಥಿಕ ಕನ್ನಡಕ್ಕೆ ಪೋಣಿಸುವ ಕೆಲಸ ಮಾಡಿದರೆ ಕನ್ನಡ ಭಾಷೆಗೆ ಅಳಿವು ಎನ್ನುವ ಮಾತು ಇರಲಾರದು ಎಂದರು.
ಯಾವುದೇ ಭಾಷೆಯ ಬಗ್ಗೆ ಕೀಳರಿಮೆ ಪಟ್ಟುಕೊಳ್ಳುವುದು ಅವಿವೇಕತನ. ಇಂಗ್ಲಿಷ್‌ನಲ್ಲಿ ವ್ಯವಹರಿಸದ ದೇಶಗಳು ಜಗತ್ತಿನಲ್ಲಿ ಇವೆ ಎನ್ನುವ ಸತ್ಯವೇ ಇದಕ್ಕೆ ಸಾಕ್ಷಿ. ನವ್ಯೋತ್ತರಗಳಾಗಿ ದಲಿತ ಬಂಡಾಯದೊಳಗೆ ಮಹಿಳಾ ಸಾಹಿತ್ಯವೂ ಸೇರಿದಂತೆ ಹೊಸ ಚೈತನ್ಯದ ಸಂಚಾರವಾದಾಗ ಅನೇಕರು ಈ ನಿಟ್ಟಿನಲ್ಲಿ ಗುರುತಿಸಲ್ಪಟ್ಟರು. ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿರುವವರು ಅಲ್ಲೇ ನಿಲ್ಲದೆ ಪಂಥ, ವಾದಗಳನ್ನು ಮೀರಿ ಸಮಾಜಮುಖಿಯಾಗಿ ಬರೆಯುವವರೂ ಇದ್ದಾರೆ ಎಂದು ಚಂದ್ರಕಲಾ ನಂದಾವರ ಸಂತಸ ವ್ಯಕ್ತಪಡಿಸಿದರು.
ಮುಸ್ಲಿಮ್ ಸಂವೇದನೆ ಎಂದು ಗುರುತಿಸಲ್ಪಟ್ಟ ಹೆಸರಲ್ಲಿ ಡಾ.ಸಾರಾ ಅಬೂಬಕರ್ ಅವರದ್ದು ಬಹುಮುಖ್ಯ ಹೆಸರು. ಮುಸ್ಲಿಮ್ ಮಹಿಳೆಯರು ಕನ್ನಡ ಭಾಷೆಯನ್ನು ಒಪ್ಪಿಕೊಳ್ಳುವಲ್ಲಿ ಶಹನಾಝ್‌ರ ಸಂಪಾದಕತ್ವದ ಅನುಪಮಾ ಪತ್ರಿಕೆ ಪ್ರಮುಖವಾಗಿದೆ ಎಂದವರು ಹೇಳಿದರು.







