ತಮಾಷೆ ಹೆಸರಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ- ಯುವಕನ ಬಂಧನ

ಹೊಸದಿಲ್ಲಿ, ಜ.8: ಸಾರ್ವಜನಿಕವಾಗಿ ಮಹಿಳೆಯನ್ನು ಚುಂಬಿಸುವ ಯುಟ್ಯೂಬ್ ವೀಡಿಯೊ ಒಂದರ ಬಗ್ಗೆ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಅಂತರ್ಜಾಲದಲ್ಲಿ ವ್ಯಾಪಕವಾಗಿ ಪ್ರಚಾರವಾಗುತ್ತಿರುವ ಈ ವೀಡಿಯೋದಲ್ಲಿ ತಮಾಷೆಯ (ಪ್ರಾಂಕ್) ಹೆಸರಿನಲ್ಲಿ ಯುವತಿಯನ್ನು ಬೇಸ್ತು ಬೀಳಿಸಿ ಚುಂಬಿಸಿರುವ ದೃಶ್ಯವಿದೆ. 20ರ ಪ್ರಾಯದ ಯುವಕ ಸುಮಿತ್ ವರ್ಮಾ ತನ್ನ ಯುಟ್ಯೂಬ್ ಚಾನೆಲ್ ‘ದ ಕ್ರೇಜಿ ಸುಮಿತ್’ ನಲ್ಲಿ ‘ಅತೀ ಮೋಜಿನ ಭಾರತೀಯ ಯು ಟ್ಯೂಬ್ ಪ್ರಾಂಕ್ 2017’ ಎಂದು ಈ ವೀಡಿಯೊ ಅಪ್ ಲೋಡ್ ಮಾಡಿದ್ದರು.
ಈ ಕ್ಲಿಪ್ ನಲ್ಲಿ ವರ್ಮಾ ದಿಲ್ಲಿಯ ಕನ್ನಾಟ್ ಪ್ಲೇಸ್ ನಲ್ಲಿ ಯುವತಿಯೊಬ್ಬಳಿಗೆ ಪ್ರಶ್ನೆ ಕೇಳುವ ನೆಪದಲ್ಲಿ ಆಕೆಯ ಕಡೆಗೆ ಬಾಗಿ ಚುಂಬಿಸುವ ದೃಶ್ಯವಿದೆ. ನಂತರ ಆತ ಕ್ಷಮೆ ಕೇಳಿ ಸ್ಥಳದಿಂದ ಓಡಿ ಹೋಗುತ್ತಾನೆ. ಮಹಿಳೆ ಆತನನ್ನು ಹಿಡಿಯಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಮತ್ತೊಂದು ಕ್ಲಿಪ್ ನಲ್ಲಿ ವರ್ಮಾ ಮಹಿಳೆಯೊಬ್ಬರನ್ನು ಚುಂಬಿಸಿದಾಗ ಆಕೆಯ ಸ್ನೇಹಿತ ಹಿಡಿಯಲು ಪ್ರಯತ್ನಿಸುತ್ತಿದ್ದಂತೇ ಕೆಟ್ಟ ಸಂಜ್ಞೆ ಮಾಡಿ ಓಡಿ ಹೋಗುತ್ತಾನೆ.
ವೀಡಿಯೊ ಮೇಲೆ ಪೊಲೀಸರು ಪ್ರತಿಕ್ರಿಯಿಸಿದ ಮೇಲೆ ಇತರ ಹಲವು ಅಶ್ಲೀಲವಾಗಿ ತಮಾಷೆ ಮಾಡಿದ ವಿಡಿಯೋಗಳನ್ನು ವರ್ಮಾ ಡಿಲೀಟ್ ಮಾಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋಗಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ಮಹಿಳೆಗೆ ತೋರುವ ಅಗೌರವ ಎಂದು ಅಭಿಪ್ರಾಯ ವ್ಯಕ್ತವಾಗಿದ್ದವು.
ಯಾರೂ ಈವರೆಗೂ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡದೆ ಇದ್ದರೂ ವಿಡಿಯೋಗಳನ್ನೇ ಇಟ್ಟುಕೊಂಡು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಹಿಳೆಯರು ಸ್ವತಃ ಬಂದು ದೂರು ನೀಡುವಂತೆ ಪೊಲೀಸರು ಹೇಳಿದ್ದಾರೆ. ಹೀಗೆ ದೊಡ್ಡ ಸುದ್ದಿ ಮಾಡುತ್ತಿರುವ ವೀಡಿಯೊ ವರ್ಮಾ ಅವರದ್ದು ಮಾತ್ರವಲ್ಲ. ಈ ಹಿಂದೆಯೂ ತಮಾಷೆ ಹೆಸರಲ್ಲಿ ಯು ಟ್ಯೂಬ್ ಗಳಲ್ಲಿ ಇಂತಹ ಅಶ್ಲೀಲ ವೀಡಿಯೋಗಳು ಪ್ರಸಾರವಾಗಿದ್ದಿದೆ. ವರ್ಮಾ ಅವರ ಯು ಟ್ಯೂಬ್ ಚಾನೆಲ್ ಗೆ 1.5 ಲಕ್ಷ ಚಂದಾದಾರರಿದ್ದಾರೆ.







