ಗುಡಿಸಲಿಗೆ ನುಗ್ಗಿದ ಕಾರು; ನಾಲ್ವರ ಸಾವು

ಲಕ್ನೋ, ಜ.8: ಗುಡಿಸಲಿಗೆ ಕಾರು ನುಗ್ಗಿದ ಪರಿಣಾಮವಾಗಿ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದು ಮುಂಜಾನೆ ನಡೆದಿದೆ.
ಲಕ್ನೋದ ದಲಿಭಾಗ್ ಪ್ರದೇಶದಲ್ಲಿ ಕೂಲಿ ಕಾರ್ಮಿಕರಿದ್ದ ಗುಡಿಸಲಿಗೆ ವೇಗವಾಗಿ ಬಂದ ಕಾರು ನುಗ್ಗಿದೆ. ಪರಿಣಾಮವಾಗಿ ಗುಡಿಸಲಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಎಲ್ಲಾ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅವರಲ್ಲಿ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮಾಜಿ ಶಾಸಕರೊಬ್ಬರ ಪುತ್ರ ಸೇರಿದ್ದಾನೆ. ಉಳಿದ ಮೂವರು ಪರಾರಿಯಾಗಿದ್ದಾರೆ.
ಕಾರು ಚಲಾಯಿಸುತ್ತಿದ್ದ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲರು ಕುಡಿದ ಮತ್ತಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





