ಅನಿವಾಸಿ ಭಾರತೀಯರಿಗೆ ಭಾರತ ಧರ್ಮಭೂಮಿಯಾಗಿದೆ : ಪ್ರಧಾನಿ ಮೋದಿ

ಬೆಂಗಳೂರು, ಜ.8: ಅನಿವಾಸಿ ಭಾರತೀಯರು ನೆಲೆಸಿರುವ ಜಾಗ ಕರ್ಮಭೂಮಿಯಾಗಿದೆ. ಭಾರತ ಅವರಿಗೆ ಧರ್ಮಭೂಮಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರವಾಸಿ ಭಾರತೀಯ ದಿವಸ್ ನಲ್ಲಿ ಇಂದು ದಿಕ್ಸೂಚಿ ಭಾಷಣ ಮಾಡಿದ ಅವರು 30 ಮಿಲಿಯನ್ ಅನಿವಾಸಿ ಭಾರತೀಯರು ವಿಶ್ವದ ಎಲ್ಲಡೆ ಇದ್ದಾರೆ. ಇರುವ ದೇಶದಲ್ಲಿಂದಲೇ ತಾಯ್ನಾಡಿಗೆ ಅವರು ನೀಡುವ ಕೊಡುಗೆ ಅಪಾರ.ಭಾರತದ ಅಭಿವೃದ್ಧಿಯ ಪಥದಲ್ಲಿ ಅನಿವಾಸಿ ಭಾರತೀಯರು ಪಾಲುದಾರರು ಎಂದರು.
ವಿದೇಶದಲ್ಲಿ ಕೆಲಸ ಹುಡುಕಲು ಹೋಗುವ ಯುವಕ, ಯುವತಿಯರಿಗಾಗಿ ತರಬೇತಿ ನೀಡಲು ಪ್ರವಾಸಿ ಕೌಶಲ್ ವಿಕಾಸ್ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಮೊದಲ ಬಾರಿ ವಿದೇಶಕ್ಕೆ ತೆರಳುವವರಿಗೆ ಆ ದೇಶದಲ್ಲಿನ ಸಂಸ್ಕೃತಿಯ ಬಗ್ಗೆ ಅರಿವು ಮತ್ತು ಅಲ್ಲಿ ಹೇಗೆ ಕೆಲಸ ನಿರ್ವಸಬೇಕೆಂಬ ಮಾಹಿತಿಯನ್ನು ಒದಗಿಸಲಾಗುವುದು .ಪಾಸ್'ಪೋರ್ಟ್ ಬಣ್ಣವನ್ನು ನಾವು ನೋಡುವುದಿಲ್ಲ, ಅದರೊಂದಿರುವ ರಕ್ತದ ಸಂಬಂಧವನ್ನು ನೋಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಭಾರತೀಯರ ಹೆಜ್ಜೆ ಗುರುತುಗಳಿವೆ. ವಿಜ್ಞಾನ, ತಂತ್ರಜ್ಞಾನ,ಬ್ಯಾಂಕಿಂಗ್, ಆರ್ಥಿಕತೆ ಮತ್ತು ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆ ದೊಡ್ದದು, ಬ್ರೇನ್ ಡ್ರೇನ್ ನ್ನು ಬ್ರೇನ್ ಗೇನ್ ಆಗಿ ಪರಿವರ್ತಿಸುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ಮೋದಿ ಹೇಳಿದರು.
ಕಾಳಧನದ ವಿರುದ್ಧ ಯುದ್ಧವೊಂದನ್ನು ಸಾರಿದ್ದೇವೆ. ಈ ಯಜ್ಞದಲ್ಲಿ ಸಹಕಾರ ನೀಡಿದಕ್ಕೆ ಅಭಿನಂದನೆಗಳು ಎಂದು ಮೋದಿ ನುಡಿದರು.
ಕಾರ್ಯಕ್ರಮದಲ್ಲಿ ಪೋರ್ಚುಗಲ್ ಪ್ರಧಾನಮಂತ್ರಿ ಆಂಥೋನಿಯೋ ಕೋಸ್ಟಾ, ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಭಾಗವಸಿದ್ದಾರೆ.







