ಮೋದಿ ನೂರು ಬಾರಿ ಜನಿಸಿದರೂ ಏಕರೂಪ ನಾಗರಿಕ ಸಂಹಿತೆ ಜಾರಿ ಸಾಧ್ಯವಿಲ್ಲ: ರಮೇಶ್ ಚೆನ್ನಿತ್ತಲ

ಪಟ್ಟಿಕ್ಕಾಡ್(ಮಲಪ್ಪುರಂ),ಜ.8: ತ್ರಿವಳಿ ತಲಾಕ್ ವಿಷಯದಲ್ಲಿ ಕೋಮುಧ್ರುವೀಕರಣಕ್ಕೆ ಯತ್ನಿಸುವ ಪ್ರಧಾನಿ ನೂರು ಬಾರಿ ಜನಿಸಿಬಂದರೂ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಪಟ್ಟಿಕ್ಕಾಡ್ ಜಾಮಿಅ ನೂರಿಯದ 54ನೆ ವಾರ್ಷಿಕ ಸಮ್ಮೇಳನದಲ್ಲಿ ವೆಳಿಚ್ಚಂ ಅಧಿವೇಶನ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಭಾರತದಲ್ಲಿ ಬಹುಧರ್ಮೀಯ ವೈವಿಧ್ಯತೆ ಇದೆ. ಇಲ್ಲಿ ಏಕರೂಪದ ಯಾವುದೇ ಕೋಡ್ ಜಾರಿಗೆ ಸಾಧ್ಯವಿಲ್ಲ. ಅಂತಹ ಯತ್ನಗಳಾದರೆ ಸಮಾಜ ಅದನ್ನು ತಡೆಯಲಿದೆ. ಇಸ್ಲಾಮ್ ಧರ್ಮವನ್ನು ಪ್ರಜ್ಞಾಪೂರ್ವಕ ಅವರು ಅವಹೇಳನ ನಡೆಸುತ್ತಿದ್ದಾರೆ ಎಂದ ಚೆನ್ನಿತ್ತಲ ಈ ಯತ್ನವನ್ನು ಕೇಂದ್ರ ಸರಕಾರ ಕೈಬಿಡಬೇಕು.ನೋಟು ಅಮಾನ್ಯಗೊಳಿಸುವಕ್ರಮದವರೆಗೂ ಕೋಮುಧ್ರುವೀಕರಣಕ್ಕೆ ಮೋದಿ ಶ್ರಮಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಮುಸ್ಲಿಂ ಮತಪಂಡಿತರ ವಿರುದ್ಧ ಕೇರಳದಲ್ಲಿ ವ್ಯಾಪಕ ಯುಎಪಿಎ ಹೇರಲಾಗುತ್ತಿದೆ. ತಾನು ಗೃಹ ಸಚಿವನಾಗಿದ್ದವೇಳೆ ಅನಗತ್ಯ ಕರಾಳ ಕಾನೂನುಗಳನ್ನು ಹೇರಿಲ್ಲ. ಮುಸ್ಲಿಮ್ ಮತಪಂಡಿತರು ಭಾಷಣ ಮಾಡಿದರೆ ದೇಶದ್ರೋಹ ಆರೋಪ ಹೊರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೇಂದ್ರದಲ್ಲಿ ಮೋದಿ ಮಾಡುತ್ತಿರುವುದನ್ನು ಕೇರಳದಲ್ಲಿ ಮುಂದುವರಿಸಿಕೊಂಡು ಹೋಗಬಾರದು. ಬಿಜೆಪಿಗರು, ಆರೆಸ್ಸಿಗರು ಪ್ರಚೋದಕ ಭಾಷಣ ನೀಡಿದರೆ ಯಾಕೆ ಅವರ ವಿರುದ್ಧ ಯುಎಪಿಯ ಹೇರಿಲ್ಲ ಎಂದು ಅವರು ಕೇರಳದ ಪಿಣರಾಯಿ ಸರಕಾರವನ್ನು ಪ್ರಶ್ನಿಸಿದರು. ಯಾವುದೇ ಧರ್ಮ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ ಎಲ್ಲ ಧರ್ಮಗಳಲ್ಲಿಯೂ ತೀವ್ರವಾದ ಚಟುವಟಿಕೆ ನಡೆಸುವವರಿದ್ದಾರೆ ಎಂದು ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಪಿವಿ ಅಬ್ದುಲ್ ವಹಾಬ್,ಕೆ.ಪಿ.ಎ. ಮಜೀದ್, ಶಾಸಕರಾದ ಡಾ. ಎಂ.ಕೆ. ಮುನೀರ್, ಶಂಸುದ್ದೀನ್ ಮುಂತಾದವರು ಮಾತಾಡಿದರು ಎಂದು ವರದಿ ತಿಳಿಸಿದೆ.







