ರಾಜ್ಯದಲ್ಲಿ ಯುಎಪಿಎ ಅಗತ್ಯವಿಲ್ಲ: ಪಿಣರಾಯಿ

ತಿರುವನಂತಪುರಂ,ಜ.8: ಕೇರಳದಲ್ಲಿ ಯುಎಪಿಎ ಹೇರುವ ಅಗತ್ಯವಿಲ್ಲ. ಕೆಲವು ಪ್ರಕರಣದಲ್ಲಿ ಅದನ್ನು ಹೇರಿರುವುದು ತಪ್ಪು ಎನ್ನುವ ವಾದಕ್ಕೆ ತನ್ನ ಸಹಮತ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಿಪಿಐಎಂ ಕೇಂದ್ರ ಸಮಿತಿ ಸಭೆಯ ಪ್ರಯುಕ್ತ ಪುತ್ತರಿಕಂಡಂ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.
ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳು ಕೇರಳದಲ್ಲಿ ನಡೆಯುತ್ತಿದೆ. ಅಂತಹ ಪ್ರಕರಣಗಳಲ್ಲಿ ಯುಎಪಿಎ ಹೇರಲೇ ಬೇಕಾಗುತ್ತದೆ. ಅದರಲ್ಲಿ ನಿರ್ಲಕ್ಷ್ಯವಹಿಸುವಂತಿಲ್ಲ. ಈ ವಿಷಯದಲ್ಲಿ ಮುಸ್ಲಿಂ ಲೀಗ್, ಅಲ್ಲಸಂಖ್ಯಾತ ವಿಭಾಗದ ಜಾತ್ಯತೀತ ಚಿಂತನೆಯುಳ್ಳ ಜನರು ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ. ಯಾವುದಾದರೂ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಸೇರಿದ ಕಾರಣಕ್ಕೆ ಕೇರಳದಲ್ಲಿ ಯಾರಿಗೂ ಯಾವುದೇ ದೌರ್ಜನ್ಯ ಅನುಭವಿಸುವ ಸ್ಥಿತಿ ಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಯಾವನೇ ಪೊಲೀಸ್ ಅಧಿಕಾರಿ ವರ್ತಿಸಿದರೆ ಅವರನ್ನು ತಿದ್ದುವ ಸರಕಾರ ಈಗಿದೆ. ಅಲ್ಪಸಂಖ್ಯಾತರನ್ನು ಸರಕಾರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಆಡನ್ನು ನಾಯಿಮಾಡುವಂತಿದೆ ಎಂದು ಪಿಣರಾಯಿ ವಿಜಯನ್ ಟೀಕಿಸಿದರು.
ಮಕ್ಕಳು ಹೇಗೆ ಮತಾಂತರಗೊಳಿಸಬೇಕೆಂದು ಕಲಿಸುವ ಕೋರ್ಸ್‌ಗೆ ಕೇರಳದಲ್ಲಿ ಅನುಮತಿ ನೀಡಲಾಗದು. ಇಂತಹ ದೂರುಗಳು ಬರುತ್ತಿವೆ. ಅವುಗಳನ್ನು ಪರಿಶೀಲಿಸಲು ಅಡಿಶನಲ್ ಚೀಫ್ ಸೆಕ್ರಟರಿಗೆ ಹೊಣೆ ನೀಡಲಾಗಿದೆ. ಧ್ವನಿ ಹೊರಡದಂತೆ ಮನುಷ್ಯರನ್ನು ಹೇಗೆ ಕೊಲ್ಲಬಹುದೆಂಬುದನ್ನು ಆರೆಸ್ಸೆಸ್ ಕಾರ್ಯಕರ್ತರಿಗೆ ಕಲಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಆರೆಸ್ಸೆಸ್ ದಾಂಧಲೆ ನಡೆಸುತ್ತಿದೆ. ದುಷ್ಕರ್ಮಿಗಳಿಗೆ ಯಾವುದೇ ರೀತಿ ರಕ್ಷಣೆ ಸಿಗಲಿದೆ ಎಂದು ಯಾರೂ ಭಾವಿಸುವುದು ಬೇಡ.
ರಾಜ್ಯದೊಂದಿಗೆ ಕೇಂದ್ರ ಸರಕಾರ ವೈರಿಯಂತೆ ವರ್ತಿಸುತ್ತಿದೆ. ಪಡಿತರ ಸಮಸ್ಯೆ, ಸಹಕಾರಿ ಕ್ಷೇತ್ರದ ಧ್ವಂಸ ಇದರ ಅಂಗವಾಗಿ ನಡೆದಿದೆ. ಪಡಿತರ ಸಮಸ್ಯೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು ಎಂದು ವರದಿಯಾಗಿದೆ.







